ಬೆಂಗಳೂರು:ಕೇಂದ್ರ ಸರ್ಕಾರದ ಗುಜರಿ ನೀತಿಯಡಿ 15 ವರ್ಷಕ್ಕೂ ಹಳೆಯದಾದ ವಾಹನಗಳಿಗೆ ಮುಕ್ತಿ ಕೊಡಲು ರಾಜ್ಯ ಅಗ್ನಿಶಾಮಕ ಇಲಾಖೆಯು ಮುಂದಾಗಿದ್ದು, ಈ ಮೂಲಕ ತನ್ನಲ್ಲಿರುವ ಹಳೆಯ ವಾಹನಗಳನ್ನು ಸ್ಕ್ರಾಪ್ಗೆ ಹಾಕಿ ಹೊಸ ವಾಹನಗಳನ್ನು ಖರೀದಿಸಿ ರಸ್ತೆಗಿಳಿಸಲು ಸಿದ್ಧತೆ ನಡೆಸಿದೆ.
ರಾಜ್ಯದಲ್ಲಿ ಬೇಸಿಗೆ ಕಾಲಿಡುವ ಮುನ್ನವೇ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆಗೆ ತೊಡಗಿಸಿಕೊಳ್ಳುವ ಅಗ್ನಿಶಾಮಕ ವಾಹನಗಳು ಹಳೆಯದಾಗಿವೆ. ಈ ವಾಹನಗಳು ಚಾಲನೆ ಸ್ಥಿತಿಯಲ್ಲಿದ್ದರೂ ಗುಣಮಟ್ಟ ಹಾಗೂ ಕಾರ್ಯಕ್ಷಮತೆ ಹಂತ - ಹಂತವಾಗಿ ಕ್ಷೀಣಿಸುತ್ತಿವೆ. ಅಲ್ಲದೇ, ಕೇಂದ್ರದ ಗುಜರಿ ನೀತಿಯು ಇದಕ್ಕೆ ಅಡ್ಡಿಯಾಗಿದೆ. ಹೀಗಾಗಿ 15 ವರ್ಷ ಮೇಲ್ಪಟ್ಟ ಹಳೆಯ ಅಗ್ನಿಶಾಮಕ ಸೇರಿದಂತೆ ಇನ್ನಿತರ ಅಗ್ನಿನಂದಕ ವಾಹನಗಳು ನೇಪಥ್ಯಕ್ಕೆ ಸರಿಯಲಿವೆ.
ರಾಜ್ಯದಲ್ಲಿ ಒಟ್ಟು 219 ಅಗ್ನಿಶಾಮಕ ಠಾಣೆಗಳಿದ್ದು, ಈ ಪೈಕಿ 19 ಠಾಣೆಗಳು ಬೆಂಗಳೂರು ನಗರದಲ್ಲಿವೆ. 25 ಸಾವಿರ ಲೀಟರ್ನಿಂದ 1 ಲಕ್ಷ ಲೀಟರ್ ನೀರು ತುಂಬುವ ಸಾಮರ್ಥ್ಯದ ಅಗ್ನಿಶಾಮಕ ವಾಹನಗಳಿವೆ. ರಾಜಧಾನಿ ಸೇರಿದಂತೆ ಸರಣಿ ಅಗ್ನಿ ಅವಘಡಗಳು ನಡೆದಾಗ ತುರ್ತಾಗಿ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸುವ ಜವಾಬ್ದಾರಿ ಇಲಾಖೆಯದ್ದಾಗಿದೆ.
6 ತಿಂಗಳಲ್ಲಿ ಹೊಸ ಅಗ್ನಿನಂದಕ ವಾಹನಗಳು:ಹೀಗಾಗಿ ಕೆ. ಸೇಫ್ ಯೋಜನೆಯಡಿ ಸರ್ಕಾರವು 100 ಅಗ್ನಿಶಾಮಕ ವಾಹನಗಳ ಖರೀದಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಅನುದಾನ ಮಂಜೂರು ಮಾಡಿದೆ. 100 ವಾಹನಗಳ ಖರೀದಿಗೆ ಇಲಾಖೆಯು ಕಾರ್ಯಾದೇಶ ನೀಡಿದ್ದು, ಇನ್ನೂ ಆರು ತಿಂಗಳಲ್ಲಿ ಹೊಸ ಅಗ್ನಿನಂದಕ ವಾಹನಗಳು ರಸ್ತೆಗಿಳಿಯಲಿವೆ.
ಕೇಂದ್ರದ 15ನೇ ಹಣಕಾಸು ಆಯೋಗದಡಿ 84 ವಾಹನಗಳ ಖರೀದಿಗೆ ಅಸ್ತು ಎಂದಿದ್ದು, ಇದು ಕೂಡ ಕೆಲವೇ ತಿಂಗಳಲ್ಲಿ ಇಲಾಖೆಗೆ ಸೇರ್ಪಡೆಯಾಗಲಿವೆ. ಈ ಮೂಲಕ ಒಟ್ಟು 184 ಹೊಸ ಅಗ್ನಿಶಾಮಕ ವಾಹನಗಳು ಬರಲಿದ್ದು, ಹಳೆಯ ವಾಹನಗಳ ಬದಲಾಗಿ ಪರ್ಯಾಯವಾಗಿ ಬಳಕೆಯಾಗಲಿದೆ.
15 ವರ್ಷ ಮೇಲ್ಪಟ್ಟ 463 ಹಳೆಯ ವಾಹನ: ರಾಜ್ಯದಲ್ಲಿ ಕಾರ್ಯೋನ್ಮುಖವಾಗಿರುವ ಇಲಾಖೆಗೆ ಸೇರಿದ ಅಗ್ನಿಶಾಮಕ ವಾಹನಗಳು ರಕ್ಷಣಾ ವಾಹನಗಳು, ವರುಣ ಹಾಗೂ ಅಗ್ನಿ ನಂದಿಸುವ ಕಿರು ವಾಹನಗಳು, ಕ್ಷಿಪ್ರ ರಕ್ಷಣಾ ವಾಹನಗಳು, ಜೀಪ್ ಹಾಗೂ ಬುಲೆಟ್ ಸೇರಿದಂತೆ ಇನ್ನಿತರ ವಾಹನಗಳಿದ್ದು, ಈ ಪೈಕಿ 463 ವಾಹನಗಳು 15 ವರ್ಷಕ್ಕಿಂತ ಹಳೆಯದಾಗಿವೆ.
ಸ್ಕ್ರಾಪ್ಗೆ ಹಾಕಬೇಕಾದ ಅನಿವಾರ್ಯತೆ ಸೃಷ್ಟಿ:ಈ ಪಟ್ಟಿಯಲ್ಲಿ ಸುಮಾರು 200 ಅಗ್ನಿಶಾಮಕ ವಾಹನಗಳಿವೆ. ಗುಜರಿ ನೀತಿಯಂತೆ ಗಡುವು ಮೀರಿದ ವಾಹನಗಳು ಸ್ಕ್ರಾಪ್ಗೆ ಹಾಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ತುರ್ತು ಹಾಗೂ ರಕ್ಷಣಾ ವಾಹನಗಳಿಗೆ ರಿಯಾಯಿತಿ ನೀಡುವಂತೆ ಈ ಹಿಂದೆ ಕೇಂದ್ರಕ್ಕೆ ಇಲಾಖೆಯು ಮನವಿ ಸಲ್ಲಿಸಿತ್ತು. ಮನವಿ ನಿರಾಕರಿಸಿ ಹಳೆಯ ವಾಹನಗಳನ್ನು ರಸ್ತೆಗಿಳಿಸದಂತೆ ಕೇಂದ್ರ ತಾಕೀತು ಮಾಡಿದೆ. ಹೀಗಾಗಿ ಹೊಸ ವಾಹನಗಳು ಬಂದ ಬಳಿಕ ನಿಯಮಾಸಾರವಾಗಿ ಹಳೆಯ ವಾಹನಗಳ ಸಂಚಾರ ನಿಲ್ಲಿಸಿ ಕಾಲಕ್ರಮೇಣ ವಾಹನದ ಬಿಡಿ ಭಾಗಗಳನ್ನು ಎಂಎಸ್ ಪಿಎಲ್ ಏಜೆನ್ಸಿ ಮೂಲಕ ಹರಾಜು ಹಾಕಲು ಇಲಾಖೆಯು ಸಿದ್ಧತೆ ನಡೆಸುತ್ತಿದೆ.
"ಅಗ್ನಿಶಾಮಕ ಇಲಾಖೆಯಲ್ಲಿ 15 ವರ್ಷ ಮೇಲ್ಪಟ್ಟ ಹಳೆಯದಾದ 463 ವಿವಿಧ ಅಗ್ನಿಶಾಮಕ ವಾಹನಗಳಿವೆ. ಇಂತಹ ವಾಹನಗಳನ್ನು ಕೇಂದ್ರದ ಗುಜರಿ ನೀತಿಯಂತೆ ಕಾನೂನುಬದ್ಧವಾಗಿ ಎಂಎಸ್ಟಿಸಿ ಪೋರ್ಟಲ್ ಮೂಲಕ ಹರಾಜಿಗೆ ಹಾಕಲಾಗುವುದು. ಇದಕ್ಕೆ ಪರ್ಯಾಯವಾಗಿ ರಾಜ್ಯ ಹಾಗೂ ಕೇಂದ್ರದ ವಿವಿಧ ಯೋಜನೆಯಡಿ 184 ಅಗ್ನಿನಂದಕ ವಾಹನಗಳನ್ನು ಖರೀದಿಸಲು ಕಾರ್ಯಾದೇಶ ನೀಡಲಾಗಿದೆ. ಇನ್ನು ಆರು ತಿಂಗಳಲ್ಲಿ ಹೊಸ ವಾಹನಗಳು ರಸ್ತೆಗಿಳಿಯಲಿವೆ" ಎಂದು ರಾಜ್ಯ ಅಗ್ನಿಶಾಮಕ ಇಲಾಖೆಯ ನಿರ್ದೇಶಕ ಟಿ.ಎಸ್.ಶಿವಶಂಕರ್ ತಿಳಿಸಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ-ಗೋವಾ ರೈಲು ಸಂಪರ್ಕ ಕಡಿತ: NWKRTCಯಿಂದ ವಿಶೇಷ ಬಸ್ ವ್ಯವಸ್ಥೆ