ದಾವಣಗೆರೆ:ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸುವ ಸಲುವಾಗಿ ದಾವಣಗೆರೆಯ ಇಎನ್ಟಿ ವೈದ್ಯರೊಬ್ಬರು ಮತ ಹಾಕಿದವರಿಗೆ ನಾಲ್ಕು ದಿನಗಳ ಕಾಲ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದಾರೆ. ನಾಳೆಯಿಂದ(ಬುಧವಾರ) ನಾಲ್ಕು ದಿನಗಳ ಕಾಲ ಮೂಗು, ಗಂಟಲು, ಕಿವಿ ಸಮಸ್ಯೆ ಇರುವ ರೋಗಿಗಳು ಮತದಾನ ಮಾಡಿದ ಶಾಹಿ ಹಾಕಿಸಿಕೊಂಡಿರುವ ಬೆರಳನ್ನು ತೋರಿಸಿ ಡಾ. ಶಿವಕುಮಾರ್ ಅವರ ಕ್ಲಿನಿಕ್ನಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ.
ದಾವಣಗೆರೆ ನಗರದ ತರಳಬಾಳು ಬಡಾವಣೆಯ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತದಾನ ಮಾಡುವುದು ಮೂಲಭೂತ ಕರ್ತವ್ಯ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಮತದಾನ ಮಾಡದೇ ಸರ್ಕಾರ ಹಾಗಿದೆ, ಹೀಗಿದೆ ಎಂದು ಕಾಮೆಂಟ್ ಮಾಡುವ ಬದಲು, ನಮಗೆ ಬೇಕಾದ ಸರ್ಕಾರವನ್ನು ನಾವು ಆರಿಸಿಕೊಂಡರೆ ಮುಂದಿನ ದಿನಗಳಲ್ಲಿ ನಮ್ಮ ಭವಿಷ್ಯ ಚೆನ್ನಾಗಿರುತ್ತದೆ ಎಂದರು.