ಬೆಂಗಳೂರು: ಕ್ರೀಡಾ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಹಾಜರಾತಿ ಹಾಗೂ 10 ಗ್ರೇಸ್ ಮಾರ್ಕ್ಸ್ ನೀಡುವ ಬಗ್ಗೆ ಗಂಭೀರವಾಗಿ ಪರಿಶೀಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಕರ್ನಾಟಕ ಒಲಂಪಿಕ್ ಸಂಸ್ಥೆ ಯವನಿಕಾದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಕ್ರೀಡಾಪಟುಗಳಿಗೆ ಪ್ರಶಸ್ತಿಗಳನ್ನು ವಿತರಿಸಿ ಸಿಎಂ ಮಾತನಾಡಿದರು.
ಇದಕ್ಕೂ ಮುಂಚೆ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಒಲಂಪಿಕ್ ಸಂಸ್ಥೆ ಅಧ್ಯಕ್ಷರಾದ ಗೋವಿಂದರಾಜು, ಶಾಲಾ ಮಕ್ಕಳು ಕ್ರೀಡೆಯಲ್ಲಿ ಹೆಚ್ಚೆಚ್ಚು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಕ್ರೀಡಾ ಮಕ್ಕಳಿಗೆ ಶೇ.25 ರಷ್ಡು ಹಾಜರಾತಿ ಮತ್ತು 10 ಗ್ರೇಸ್ ಮಾರ್ಕ್ ನೀಡುವಂತೆ ನಿಯಮ ರೂಪಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಈ ಬಗ್ಗೆ ಪ್ರಸ್ತಾಪಿಸಿದ ಸಿಎಂ, ಈ ಬೇಡಿಕೆಗಳು ನ್ಯಾಯೋಚಿತವಾಗಿವೆ. ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ದೇಶಕ್ಕೆ ಒಂದು ಚಿನ್ನ ತನ್ನಿ:ರಾಜ್ಯದ ಕ್ರೀಡಾಪಟುಗಳಿಗೆ ಅಗತ್ಯ ಸವಲತ್ತು - ನೆರವು ನೀಡಲು ನಾನು ಸದಾ ಸಿದ್ಧ. ರಾಜ್ಯ ಬಜೆಟ್ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ನಿರಂತರ ಅನುದಾನ ನೀಡಿದೆ. ರಾಜ್ಯದಿಂದ ಯಾರಾದರೂ ಒಲಂಪಿಕ್ಸ್ನಲ್ಲಿ ದೇಶಕ್ಕೆ ಒಂದು ಚಿನ್ನ ತನ್ನಿ. ಚಿನ್ನದ ಪದಕ ಪಡೆದವರಿಗೆ 6 ಕೋಟಿ ಹಣ ಮೀಸಲಿಟ್ಟಿದ್ದೀವಿ. ಬೆಳ್ಳಿ ಪದಕ ಪಡೆದವರಿಗೆ 4 ಕೋಟಿ ಹಣ ಇಟ್ಟಿದ್ದೇವೆ. ಆದರೆ, ಯಾರೂ ಪದಕ ತರ್ತಾನೇ ಇಲ್ಲ. ದೇಶಕ್ಕೆ ಯಾರಾದರೂ ಚಿನ್ನ ತನ್ನಿ ಎಂದು ಕರೆ ನೀಡಿದರು.