ಮಂಗಳೂರು: ತಾನು ಕಲಿತ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ನಿಧಿ ಹೊಂದಿಸಲು ಯೋಗ ಶಿಕ್ಷಕರೊಬ್ಬರು ನಿರಂತರ 25 ಗಂಟೆಗಳ ಯೋಗ ತರಬೇತಿ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ವೈಯಕ್ತಿಕ ಮತ್ತು ಸಂಸ್ಥೆಯ ಹೆಸರಿನಲ್ಲಿ ದಾಖಲೆ ಬರೆದಿದ್ದಾರೆ.
2024ರ ಜುಲೈ 22ರಿಂದ 23ವರೆಗೆ ಮಂಗಳೂರಿನ ಯೆನೆಪೋಯ ವೈದ್ಯಕೀಯ ಸಂಸ್ಥೆಯ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಈ ದಾಖಲೆಯ ಯೋಗ ನಡೆದಿತ್ತು. ಯೋಗ ಶಿಕ್ಷಕ ಕುಶಾಲಪ್ಪ ಗೌಡ ಯಾವುದೇ ವಿಶ್ರಾಂತಿ ಇಲ್ಲದೆ, ಉಪಹಾರ ಸೇವಿಸದೇ ನಿರಂತರ 25 ಗಂಟೆ 4 ನಿಮಿಷ 35 ಸೆಕೆಂಡ್ ಯೋಗ ತರಬೇತಿ ನೀಡಿದ್ದರು. ಇದರಲ್ಲಿ 2,693 ಮಂದಿ ಯೋಗ ತರಬೇತಿ ಪಡೆದಿದ್ದರು. ಇವರೆಲ್ಲರೂ ವೈದ್ಯಕೀಯ ಸಿಬ್ಬಂದಿ ಎನ್ನುವುದು ವಿಶೇಷ.
ಈ ಮ್ಯಾರಾಥನ್ ಯೋಗ ಶಿಕ್ಷಣ ನಡೆಯುವ ಸಂದರ್ಭದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನ ಅಧಿಕಾರಿಗಳು ಹಾಜರಿದ್ದರು. ಈ ದಾಖಲೆಯ ಯೋಗ ಶಿಕ್ಷಣವನ್ನು ಕಣ್ಣಾರೆ ಕಂಡ ಅಧಿಕಾರಿಗಳು ಎರಡು ದಾಖಲೆಗಳನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ದಾಖಲಿಸಿದ್ದಾರೆ. 25 ಗಂಟೆ ನಿರಂತರ ಯೋಗ ಶಿಕ್ಷಣ ನೀಡಿರುವುದಕ್ಕೆ ಕುಶಾಲಪ್ಪ ಗೌಡರಿಗೆ ಮತ್ತು ಯೆನೆಪೋಯ ಸಂಸ್ಥೆಗೆ ಮೋಸ್ಟ್ ಹೆಲ್ತ್ ಕೇರ್ ಪ್ರೊಫೆಶನಲ್ ಯೋಗ ಸೆಷನ್ಸ್ ದಾಖಲೆ ಬರೆಯಲಾಗಿದೆ.