ಬೆಳಗಾವಿ: ದೇಹದಾನ ಮಾಡಿದ್ದ ತಂದೆಯ ಮೃತದೇಹವನ್ನು ವೃತ್ತಿಯಲ್ಲಿ ವೈದ್ಯನಾಗಿದ್ದ ಪುತ್ರ ಛೇದಿಸಿದ ವಿಶ್ವದಾಖಲೆಗೆ ಗಡಿನಾಡು ಬೆಳಗಾವಿ ಸಾಕ್ಷಿಯಾಗಿತ್ತು. ಇಂಥದ್ದೊಂದು ಐತಿಹಾಸಿಕ ಘಟನೆಗೆ ಇಂದಿಗೆ 14 ವರ್ಷ. ಇದರಿಂದ ಪ್ರೇರಣೆ ಪಡೆದು ಮುಂದೆ ಸಾವಿರಾರು ಜನರು ದೇಹದಾನಕ್ಕೆ ಮುಂದಾಗಿದ್ದು, ಈ ಪೈಕಿ ಸ್ವಾಮೀಜಿಗಳೂ ಸೇರಿದ್ದಾರೆ. ಸ್ವಾಮೀಜಿಗಳು ಮಠಗಳಲ್ಲಿ ಅನ್ನ, ಅಕ್ಷರ, ಜ್ಞಾನ ನೀಡುವುದರೊಂದಿಗೆ ದೇಹದಾನಕ್ಕೂ ಪ್ರತಿಜ್ಞೆ ತೊಟ್ಟಿರುವುದು ವಿಶೇಷವಾಗಿದೆ.
17ನೇ ಶತಮಾನದ ಕೊನೆಯಲ್ಲಿ ವೈದ್ಯಕೀಯ ವಿಜ್ಞಾನದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದ ಇಂಗ್ಲೆಂಡ್‌ನ ಫ್ಲೊಕ್‌ಸ್ಟೋನ್ ಕೆಂಟ್‌ನ ಸರ್.ವಿಲಿಯಂ ಹಾರ್ವೆ ತನ್ನ ಮೃತ ಸಹೋದರಿಯ ದೇಹ ಛೇದಿಸಿ ಮಾನವ ದೇಹದ ರಕ್ತ ಪರಿಚಲನೆ ಕಂಡುಹಿಡಿದಿದ್ದರು. 300 ವರ್ಷಗಳ ಬಳಿಕ ಇದನ್ನೇ ಪ್ರೇರಣೆಯಾಗಿಸಿಕೊಂಡು ಡಾ.ಮಹಾಂತೇಶ ರಾಮಣ್ಣವರ ಮೃತಪಟ್ಟ ತಮ್ಮ ತಂದೆಯ ದೇಹ ಛೇದಿಸಿ ವೈದ್ಯಕೀಯ ಲೋಕವನ್ನು ಅಚ್ಚರಿಗೊಳಿಸಿದ್ದರು.
ವೈದ್ಯ ವೃತ್ತಿ ನನಗೆ ರೋಗಿಗಳ ಸೇವೆ ಮಾಡುವ ಸದಾವಕಾಶದ ಜೊತೆಗೆ ಅನ್ನ, ಐಶ್ವರ್ಯ, ಖ್ಯಾತಿ ನೀಡಿ ಬದುಕು ಕಟ್ಟಿಕೊಟ್ಟಿದೆ. ಇದರ ಋಣ ತೀರಿಸಲು ಮರಣಾನಂತರ ತಮ್ಮ ದೇಹದಾನ ಮಾಡುವುದಾಗಿ ಬೈಲಹೊಂಗಲ ನಗರದ ಖ್ಯಾತ ವೈದ್ಯರಾಗಿದ್ದ ಡಾ.ಬಸವಣ್ಣೆಪ್ಪ ಸಂಗಪ್ಪ ರಾಮಣ್ಣವರ ವಾಗ್ದಾನ ಮಾಡಿದ್ದರು. ಅದರಂತೆ 2008ರ ನವೆಂಬರ್ 13ರಂದು ನಿಧನರಾದ ಅವರ ದೇಹದಾನ ಮಾಡಲಾಗಿತ್ತು. ಮೊದಲಿಗೆ, 2002ರಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದೇಹ ನೀಡುವುದಾಗಿ ಹೇಳಿದ್ದ ಅವರು ಬಳಿಕ ಪುತ್ರ ಕೆಲಸ ಮಾಡುವ ಮಹಾವಿದ್ಯಾಲಯಕ್ಕೆ ತಮ್ಮ ದೇಹ ನೀಡುವಂತೆ ಮೃತ್ಯು ಪತ್ರದಲ್ಲಿ ಉಲ್ಲೇಖಿಸಿದ್ದರು. ಆ ಪ್ರಕಾರ ಕೆಎಲ್ಇ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯಕ್ಕೆ ಅವರ ದೇಹವನ್ನು ಹಸ್ತಾಂತರಿಸಲಾಗಿತ್ತು. ಸ್ವತಃ ತಮ್ಮ ತಂದೆಯ ದೇಹವನ್ನು ಡಾ.ಮಹಾಂತೇಶ ರಾಮಣ್ಣವರ ಛೇದಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ಪತ್ರದಲ್ಲಿ ಏನಿತ್ತು? "ಮರಣಾನಂತರ ನನ್ನ ದೇಹವನ್ನು ದಾನವಾಗಿ ಕೆಎಲ್ಇ ಆಯುರ್ವೇದ ಕಾಲೇಜಿಗೆ ನೀಡಿದ್ದೇನೆ. ಇದಕ್ಕೆ ರಾಮಣ್ಣವರ ಕುಟುಂಬದ ಸದಸ್ಯರು ತಂಟೆ ತಕರಾರು ಮಾಡುವಂತಿಲ್ಲ. ಅಲ್ಲದೇ ನನ್ನ ದೇಹವನ್ನು ನನ್ನ ಸುಪುತ್ರ ಡಾ.ಮಹಾಂತೇಶನೇ ಛೇದಿಸಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು" ಎಂದು ತಿಳಿಸಿದ್ದರು. "ಎರಡು ವರ್ಷ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಮೃತದೇಹವನ್ನು ಇರಿಸಲಾಗಿತ್ತು. 2010ರ ನವೆಂಬರ್ 13ರಂದು ದೇಹ ಛೇದಿಸಿ, ವಿದ್ಯಾರ್ಥಿಗಳಿಗೆ ಪಾಠ ಮಾಡಲಾಯಿತು. ಈಗಲೂ ಮೃತದೇಹವನ್ನು ಸಂಗ್ರಹಿಸಿಟ್ಟಿದ್ದು, ವೈದ್ಯ ವಿದ್ಯಾರ್ಥಿಗಳು ಹಾಗೂ ದಾನಿಗಳಿಗೆ ಪ್ರೇರಣೆಯಾಗಿದೆ" ಎಂದು ಈಟಿವಿ ಭಾರತಕ್ಕೆ ಡಾ.ಮಹಾಂತೇಶ ರಾಮಣ್ಣವರ ತಿಳಿಸಿದರು.
ತಂದೆಯ ದೇಹ ಛೇದಿಸಿದ ಬಳಿಕ ಸುಮ್ಮನೆ ಕೂರದ ಡಾ.ಮಹಾಂತೇಶ ಅವರು ಪಟ್ಟಣಕ್ಕೆ ಪಂಚರಾತ್ರಿಯಂತೆ ಹಳ್ಳಿಗೆ ಏಕರಾತ್ರಿಯಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿ, ದೇಹದಾನ ಮಹತ್ವ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಈವರೆಗೂ ಸಾವಿರಾರು ಜನ ಇವರಿಂದ ಪ್ರೇರಿತರಾಗಿ ಮರಣಾನಂತರ ದೇಹದಾನ ಘೋಷಿಸಿದ್ದಾರೆ. ವಿಶೇಷವಾಗಿ ದೇಹದಾನಕ್ಕೆ ಸ್ವಾಮೀಜಿಗಳೂ ಮುಂದೆ ಬಂದಿದ್ದು, ತಮ್ಮ ಭಕ್ತರಲ್ಲೂ ಜಾಗೃತಿ ಮೂಡಿಸುತ್ತಿರುವುದು ಗಮನಾರ್ಹ ಸಂಗತಿ.
ದೇಹದಾನಕ್ಕೆ ಸ್ವಾಮೀಜಿಗಳ ವಾಗ್ದಾನ:ಕೇವಲ ಜನಸಾಮಾನ್ಯರು ಅಷ್ಟೇ ಅಲ್ಲದೇ ಕೆಲ ಸ್ವಾಮೀಜಿಗಳು ಕೂಡ ಡಾ.ಮಹಾಂತೇಶ ರಾಮಣ್ಣವರ ಅವರಿಂದ ಪ್ರೇರಿತರಾಗಿ ದೇಹದಾನಕ್ಕೆ ಮುಂದಾಗಿದ್ದಾರೆ. 2017ರ ಏಪ್ರಿಲ್ 8ರಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ವಾಗ್ದಾನ ಮಾಡಿದ್ದು, ಸ್ವಾಮೀಜಿ ಪ್ರೇರಣೆಯಿಂದಲೂ ಅವರ 200ಕ್ಕೂ ಅಧಿಕ ಭಕ್ತರು ದೇಹದಾನಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ.