ಮಂಡ್ಯ : ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಹಣದಾಸೆಗೆ ಕರುಳ ಬಳ್ಳಿಗಳನ್ನ ಕೊಲ್ಲುವಂತಹ ಹೇಯ ಕೃತ್ಯವನ್ನ ಪಾಪಿಗಳು ಎಸಗುತ್ತಿದ್ದರು. ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಏನೆಲ್ಲ ಕ್ರಮಗಳನ್ನ ತೆಗೆದುಕೊಂಡರೂ ಸಕ್ಕರೆ ನಗರಿಯಲ್ಲಿ ಇಂತಹ ಹೇಯಕೃತ್ಯ ನಿರಂತರವಾಗಿ ನಡೆಯುತ್ತಿತ್ತು. ಇಂತಹ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಪ್ರಕರಣದ ಕಿಂಗ್ಪಿನ್ ಸೇರಿ 12 ಜನ ಆರೋಪಿಗಳನ್ನ ಮಂಡ್ಯ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಜಿಲ್ಲೆಯ ಪಾಂಡವಪುರ ತಾಲೂಕಿನ ಎ. ಶೆಟ್ಟಿಹಳ್ಳಿ ಗ್ರಾಮದ ಅಭಿಷೇಕ್, ದಾವಣಗೆರೆ ಜಿಲ್ಲೆ ಹೊನ್ನಾಳಿ ಮೂಲದ ವೀರೇಶ್ ಸೇರಿ ಒಟ್ಟು 12 ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 23 ಲಕ್ಷ ರೂ. ಮೌಲ್ಯದ ಎರಡು ಸ್ಕ್ಯಾನಿಂಗ್ ಮಷಿನ್, ಮೂರು ಕಾರು ಸೇರಿ ಮೂರು ಮೊಬೈಲ್ಗಳನ್ನ ವಶಕ್ಕೆ ಪಡೆದಿದ್ದಾರೆ.
ಮೊದಲಿಗೆ ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಆಲೆಮನೆಯಲ್ಲಿ ನಡೆಯುತ್ತಿದ್ದ ಕರಾಳದಂಧೆಯನ್ನ ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಭೇದಿಸಿ, ಹಲವು ಮಂದಿಯನ್ನ ಬಂಧಿಸಿದ್ದರು. ಆನಂತರ ಈ ಪ್ರಕರಣವನ್ನ ಸಿಐಡಿಗೂ ವಹಿಸಲಾಗಿತ್ತು. ಆದರೆ, ಈ ಪ್ರಕರಣದಲ್ಲಿ ಕಿಂಗ್ ಪಿನ್ ಆಗಿದ್ದ ಅಭಿಷೇಕ್ ಬಂಧನವಾಗದೇ ತಲೆಮರೆಸಿಕೊಂಡಿದ್ದ.
ಕಿಂಗ್ಪಿನ್ ಅಭಿಷೇಕ್ ಬಂಧನ :ಆ ನಂತರ ಪಾಂಡವಪುರದ ಹೆಲ್ತ್ ಕ್ವಾಟ್ರಸ್, ಮೇಲುಕೋಟೆ, ನಾಗಮಂಗಲ ಸೇರಿದಂತೆ ಹಲವು ಕಡೆಗಳಲ್ಲಿ ನಡೆಯುತ್ತಿದ್ದ ಕರಾಳದಂಧೆ ಭೇದಿಸಿ, ಹಲವು ಆರೋಪಿಗಳನ್ನ ಬಂಧನ ಮಾಡಲಾಗಿತ್ತು. ಆದರೆ ಐದು ಪ್ರಕರಣಗಳಲ್ಲಿ ಸಿಐಡಿ ಪೊಲೀಸರು ಸೇರಿದಂತೆ ಮಂಡ್ಯ ಜಿಲ್ಲೆಯ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಿಂಗ್ ಪಿನ್ ಅಭಿಷೇಕ್ ಕರಾಳದಂಧೆಯನ್ನ ಮುಂದುವರೆಸಿಕೊಂಡು ಹೋಗಿದ್ದ. ಈತನ ಬಂಧನಕ್ಕಾಗಿಯೇ ಏಳು ತಂಡಗಳನ್ನ ರಚನೆ ಮಾಡಲಾಗಿತ್ತು. ಕೊನೆಗೂ ಐನಾತಿ ಅಭಿಷೇಕ್ ಬಂಧನವಾಗಿದೆ.
ಹಳೇ ಮೈಸೂರು ಭಾಗದ ಜಿಲ್ಲೆಗಳಾದ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಈ ಖತರ್ನಾಕ್ಗಳು ನೆಟ್ವರ್ಕ್ ಹೊಂದಿದ್ರು. ಇನ್ನು ಹಾಡ್ಯ ಆಲೆಮನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅಭಿಷೇಕ್ ಬಂಧನವಾಗಿರಲಿಲ್ಲ. ಈ ಪ್ರಕರಣವನ್ನೇ ಬಳಸಿಕೊಂಡು ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡು ಕಿಂಗ್ ಪಿನ್ ಅಭಿಷೇಕ್, ಮತ್ತೊಬ್ಬ ಆರೋಪಿ ವೀರೇಶ್ನ ಸಹಾಯದಿಂದ ದಂಧೆ ಮುಂದುವರೆಸಿದ್ದ. ಐದು ಪ್ರಕರಣಗಳಲ್ಲಿ ಚಾಲಕಿ ಅಭಿಷೇಕ್ ಬಂಧನವಾಗಿರಲಿಲ್ಲ.