ಮೈಸೂರು: ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ 75ನೇ ಗಣರಾಜ್ಯೋತ್ಸವವನ್ನು ನಗರದ ರೈಲ್ವೆ ಕ್ರೀಡಾ ಮೈದಾನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮೈಸೂರು ರೈಲ್ವೆ ವಿಭಾಗವು ವರ್ಷದಿಂದ ವರ್ಷಕ್ಕೆ ಒಟ್ಟು ಆದಾಯದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. 2023ರ ವರ್ಷದಲ್ಲಿ 1069.34 ಕೋಟಿ ಒಟ್ಟು ಆದಾಯ ಗಳಿಸಿದೆ. ಕಳೆದ ವರ್ಷ ಡಿಸೆಂಬರ ವರೆಗಿನ ಆದಾಯ 886.24 ಕೋಟಿ ಇದ್ದು 2023ಕ್ಕೆ ಹೋಲಿಸಿದರೆ, ಶೇ.20.66 ಹೆಚ್ಚಳ ಆಗಿದೆ ಎಂದು ತಿಳಿಸಿದರು.
ಸರಕು ಸಾಗಣೆ ಆದಾಯವು 711.15 ಕೋಟಿ ರೂ.ಗಳಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.27.60 ರಷ್ಟು ಆರೋಗ್ಯಕರ ಬೆಳವಣಿಗೆ ಸಾಧಿಸಿದೆ ಎಂದು ಮಾಹಿತಿ ನೀಡಿದರು. ಮೈಸೂರು ವಿಭಾಗವು 2023 ವರ್ಷದ ಡಿಸೆಂಬರ್ ವರೆಗೆ 2405 ರೇಕ್‌ಗಳೊಂದಿಗೆ 8.367 ಎಂಟಿ (ದಶಲಕ್ಷ ಟನ್) ಲೋಡ್ ಮಾಡಿದೆ. ಇದು ಹಿಂದಿನ ವರ್ಷ 2022 ರಲ್ಲಿನ 1996 ರೇಕ್‌ಗಳೊಂದಿಗೆ 6.525 ಎಂಟಿ ಲೋಡಿಂಗ್ ಮಾಡಿತು. ಇದಕ್ಕೆ ಹೋಲಿಸಿದರೆ ಶೇ.28.2 ಹೆಚ್ಚಳವನ್ನು ಸೂಚಿಸುತ್ತದೆ. 2023 ಡಿಸೆಂಬರ್ ಮಾಸಿಕದಲ್ಲಿ ಮೈಸೂರು ವಿಭಾಗವು 319 ರೇಕ್‌ಗಳೊಂದಿಗೆ 1.125 ಮಿಲಿಯನ್ ಟನ್‌ಗಳಷ್ಟು (ಎಂಟಿ) ಅತ್ಯಧಿಕ ಲೋಡ್ಗಳನ್ನು ಸಾಗಿಸಿ ಹೊಸ ದಾಖಲೆ ನಿರ್ಮಿಸಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಈ ವಿತ್ತೀಯ ವರ್ಷದಲ್ಲಿ ಸುಮಾರು 111 ಟ್ರ್ಯಾಕ್ ಕಿಮೀ ಗಳಿಗೆ ವಿಭಾಗದ ವೇಗವನ್ನು 100 ಕಿ.ಮೀ. ನಿಂದ 110 ಕಿ.ಮೀ. ಗೆ ಹೆಚ್ಚಿಸಲಾಗುವುದು. ಬಿಸಿನೆಸ್ ಡೆವಲಪ್ಮೆಂಟ್ ಯುನಿಟ್ (ವ್ಯಾಪಾರ ಅಭಿವೃಧಿ ಘಟಕ)ದ ಪ್ರಯತ್ನದಿಂದ ವಿಭಾಗವು ಹಾವೇರಿಯಿಂದ ಮೇವನ್ನು ಲೋಡ್ ಮಾಡಿದೆ. ಈಶಾನ್ಯ ಗಡಿ ರೈಲ್ವೆಯ ಲುಮ್ಡಿಂಗ್ ವಿಭಾಗದ ಭಂಗಾಗೆ ಹಾವೇರಿಯಿಂದ ಸಕ್ಕರೆಯನ್ನು ಲೋಡ್ ಮಾಡಿದೆ ಎಂದು ತಿಳಿಸಿದರು.