ಮಂಗಳೂರು: ನಗರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಉದ್ಯಮಿಯ ಮನೆ ದರೋಡೆ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ 10 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯ ನೀರುಮಾರ್ಗದ ವಸಂತ ಯಾನೆ ವಸಂತ ಕುಮಾರ್, ರಮೇಶ ಪೂಜಾರಿ, ಬಂಟ್ವಾಳ ತಾಲೂಕಿನ ಅಡ್ಯನಡ್ಕದ ರೈಮಂಡ್ ಡಿಸೋಜಾ, ಕಾಸರಗೋಡು ಜಿಲ್ಲೆಯ ಉಪ್ಪಳದ ಬಾಲಕೃಷ್ಣ ಶೆಟ್ಟಿ ಬಾಲಣ್ಣ, ತ್ರಿಶೂರ್ ಜಿಲ್ಲೆಯ ಜಾಕೀರ್ ಯಾನೆ ಶಾಕೀರ್ ಹುಸೈನ್, ವಿನೋಜ್ ಪಿ.ಕೆ ಯಾನೆ ವಿನೋಜ್, ಬಿಜು.ಜಿ., ಸತೀಶ್ ಬಾಬು, ಶಿಜೋ ದೇವಸ್ಸಿ ಎಂಬುವರೇ ಬಂಧಿತರು ಎಂದು ಅವರು ಮಾಹಿತಿ ನೀಡಿದರು.
ಪ್ರಕರಣದ ವಿವರ ಸಂಪೂರ್ಣ :ಜೂನ್ 21ರಂದು ಸಂಜೆ ಸುಮಾರು 7.45 ಗಂಟೆಗೆ ಮಂಗಳೂರು ನಗರದ ಉಳಾಯಿಬೆಟ್ಟು ಪೆರ್ಮಂಕಿ ನಿವಾಸಿ ಉದ್ಯಮಿಯಾದ ಪದ್ಮನಾಭ ಕೋಟ್ಯಾನ್ ಮನೆಯಲ್ಲಿ ದರೋಡೆ ನಡೆದಿತ್ತು. ಸುಮಾರು 10-12 ಆರೋಪಿಗಳು ಚೂರಿಯಿಂದ ಪದ್ಮನಾಭ ಕೋಟ್ಯಾನ್ ಮೇಲೆ ಹಲ್ಲೆ ನಡೆಸಿ ನಂತರ ಅವರ ಪತ್ನಿ ಹಾಗೂ ಮಗನನ್ನು ಕಟ್ಟಿ ಹಾಕಿದ್ದರು. ನಗದು ಹಣ ಹಾಗೂ ಬೆಲೆಬಾಳುವ ಸುಮಾರು 9 ಲಕ್ಷ ಮೌಲ್ಯದ ಸೊತ್ತುಗಳನ್ನು ದರೋಡೆಗೈದಿದ್ದರು ಎಂದು ಕಮೀಷನರ್ ಅನುಪಮ್ ಹೇಳಿದರು.
ಈ ಬಗ್ಗೆ ದಾಖಲಾದ ಪ್ರಕರಣ ಸಂಬಂಧ ನಗರ ಅಪರಾಧ ವಿಭಾಗ (ಸಿಸಿಬಿ), ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ದಕ್ಷಿಣ ಉಪ ವಿಭಾಗದ ಎಸಿಪಿ ನೇತೃತ್ವದ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಮನೆಯಲ್ಲಿನ ಸಿಸಿಟಿವಿ, ವಿವಿಧ ಕಡೆಗಳ ಸಿಸಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಿ ತನಿಖೆ ಕೈಗೊಳ್ಳಲಾಗಿತ್ತು. ಅಲ್ಲದೇ, ತನಿಖೆ ತೀವ್ರಗೊಂಡಾಗ ಈ ದರೋಡೆಯಲ್ಲಿ ಉದ್ಯಮಿಯನ್ನು ಹತ್ತಿರದಿಂದ ತಿಳಿದಿರುವ ಹಾಗೂ ಅವರ ಜೊತೆಯಲ್ಲಿ ಕೆಲಸ ಮಾಡುವ ಕೆಲಸಗಾರರ ಕೈವಾಡವಿರುವುದು ಮತ್ತು ಹೊರ ರಾಜ್ಯದ ವ್ಯಕ್ತಿಗಳ ಕೈವಾಡವಿರುವುದು ತಿಳಿದು ಬಂದಿತ್ತು ಎಂದರು.
ಈ ಪ್ರಕರಣದಲ್ಲಿ ಉದ್ಯಮಿಯ ಹಾಗೂ ಅವರ ಮನೆಯ ಬಗ್ಗೆ ಮಾಹಿತಿ ನೀಡಿ ದರೋಡೆ ಕೃತ್ಯದಲ್ಲಿ ಸಹಕರಿಸಿದ ಸ್ಥಳೀಯ ಆರೋಪಿಗಳಾದ ವಸಂತ ರಮೇಶ ಪೂಜಾರಿ, ರೈಮಂಡ್ ಡಿಸೋಜಾ, ಬಾಲಕೃಷ್ಣ ಶೆಟ್ಟಿ ಬಾಲಣ್ಣನನ್ನು ಬಂಧಿಸಿ ಆರಂಭದಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ಪೈಕಿ ವಸಂತ ಉದ್ಯಮಿಯೊಂದಿಗೆ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಬಳಿಕ ಉದ್ಯಮಿಯ ವ್ಯವಹಾರದ ಹಾಗೂ ಮನೆಯ ಮಾಹಿತಿಯನ್ನು ಇನ್ನೋರ್ವ ಆರೋಪಿ ರಮೇಶ್ ಪೂಜಾರಿಗೆ ನೀಡಿದ್ದ ಎಂದು ವಿವರಿಸಿದರು.
ಬಳಿಕ ರಮೇಶ್ ಪೂಜಾರಿ ಮತ್ತು ರೈಮಂಡ್ ಡಿಸೋಜಾ ಸೇರಿ ಇನ್ನೋರ್ವ ಆರೋಪಿ ಬಾಲಕೃಷ್ಣ ಶೆಟ್ಟಿಗೆ ಮಾಹಿತಿ ನೀಡಿದ್ದ. ಬಾಲಕೃಷ್ಣ ಶೆಟ್ಟಿಯು ತನ್ನ ಸ್ನೇಹಿತ ಕೇರಳದ ವ್ಯಕ್ತಿಯೊಂದಿಗೆ ದರೋಡೆ ನಡೆಸಲು ಸಂಚು ರೂಪಿಸಿ, ಇತರ ಆರೋಪಿಗಳನ್ನು ಮಂಗಳೂರಿಗೆ ಕರೆಯಿಸಿಕೊಂಡು ಕೃತ್ಯ ನಡೆಸಿದ್ದರು ಎಂದು ತನಿಖೆಯಲ್ಲಿ ಬಯಲಾಗಿದೆ ಎಂದು ಅವರು ತಿಳಿಸಿದರು.
300 ಕೋಟಿ ದರೋಡೆಗೆ ಏಳು ತಿಂಗಳಿಂದ ಸ್ಕೆಚ್:ಉದ್ಯಮಿಯ ಬಳಿ ಕೋಟ್ಯಾಂತರ ಹಣ ಇದ್ದು, ಅದನ್ನು ಮಾಸ್ಟರ್ ಬೆಡ್ ರೂಮ್ನ ಟೈಲ್ಸ್ನೊಳಗೆ ಬಚ್ಚಿಡಲಾಗಿದೆ ಎಂದು ಆರೋಪಿ ರಮೇಶ್ ಪೂಜಾರಿಗೆ ವಸಂತಕುಮಾರ್ ತಿಳಿಸಿದ್ದ. ಕೇರಳದ ಆರೋಪಿಗಳಿಗೆ ಮಾಹಿತಿ ನೀಡುವಾಗ ಸುಮಾರು 300 ಕೋಟಿ ಹಣ ಇದೆ ಎಂದು ತಿಳಿಸಿದ್ದ. ಹೀಗೆ 300 ಕೋಟಿ ಹಣವನ್ನು ದರೋಡೆ ಮಾಡಲು ಏಳು ತಿಂಗಳಿಂದ ಸ್ಕೆಚ್ ಹಾಕಲಾಗಿತ್ತು. ದರೋಡೆ ಮಾಡಿದ ಹಣವನ್ನು ಕೊಂಡೊಯ್ಯಲು ಆರೋಪಿಗಳು ಏಳೆಂಟು ಚೀಲಗಳನ್ನು ತಂದಿದ್ದರು ಎಂದು ಪೊಲೀಸ್ ಕಮೀಷನರ್ ಹೇಳಿದರು.
ಈ ಪ್ರಕರಣದಲ್ಲಿ ಭಾಗಿಯಾದ ಕೇರಳದ ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಎರಡು ತಂಡಗಳು ಕೇರಳಕ್ಕೆ ತೆರಳಿದ್ದವು. ಈ ಕೃತ್ಯದಲ್ಲಿ ಒಟ್ಟು 15ಕ್ಕೂ ಹೆಚ್ಚು ಆರೋಪಿಗಳು ಭಾಗಿಯಾಗಿರುವುದು ತನಿಖೆಯಿಂದ ಕಂಡು ಬಂದಿದೆ. ಆರೋಪಿಗಳ ಪೈಕಿ ವಸಂತ ಕುಮಾರ್ ಸೇರಿ ಇತರ ವಿರುದ್ಧ ಈ ಹಿಂದೆ ಪ್ರಕರಣಗಳು ದಾಖಲಿದ್ದವು ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ:ಯುವಕನ ರೀಲ್ಸ್ ಶೋಕಿಗೆ ನಕಲಿ ಗನ್ ಬಾಡಿಗೆ ನೀಡಿದ್ದ ಸಿನಿಮಾ ಟೆಕ್ನಿಷಿಯನ್ಗೆ ನೋಟಿಸ್