ಗಂಗಾವತಿ (ಕೊಪ್ಪಳ): ಮೊದಲ ವಿವಾಹವನ್ನು ಮರೆಮಾಚಿ ಎರಡನೇ ಮದುವೆಯಾಗಿ ಮಹಿಳೆಗೆ ವಂಚಿಸಿದ ಪ್ರಕರಣದಲ್ಲಿ ಆರೋಪಿಗೆ, ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ ದರ್ಬಾರೆ ಅವರು ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಸಂಡೂರು ತಾಲೂಕಿನ ದೋಣಿಮಲೈ ನಿವಾಸಿ ಶ್ರೀನಿವಾಸ ವಿ ನುಕುಲ ಶಿಕ್ಷೆಗೊಳಗಾದವರು. ಈತನ ಮೇಲೆ ಗಂಗಾವತಿ ತಾಲೂಕಿನ ಶ್ರೀರಾಮನಗರದ ಮಹಿಳೆಯೊಬ್ಬರು ಗ್ರಾಮೀಣ ಠಾಣೆಯಲ್ಲಿ ದಾಖಲಿಸಿದ್ದ ವಂಚನೆ ಪ್ರಕರಣದ ದೋಷಾರೋಪಣೆಯ ಹಿನ್ನೆಲೆ ನ್ಯಾಯಾಲಯ ಈ ಆದೇಶ ಮಾಡಿದೆ.
ಪ್ರಕರಣದ ವಿವರ:ಮೊದಲನೇ ಹೆಂಡತಿಯಿಂದ ವಿವಾಹ ವಿಚ್ಛೇದನ ಪಡೆಯದೇ ವಿಚ್ಛೇದನ ಆಗಿದೆ ಎಂದು ಸುಳ್ಳು ಹೇಳಿ ಶ್ರೀನಿವಾಸ್, ಮಹಿಳೆಯೊಬ್ಬರನ್ನು ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಂಡಿದ್ದ. ತನ್ನ ಪತಿಗೆ ಈ ಮೊದಲೇ ಮದುವೆಯಾಗಿರುವ ವಿಷಯ ಎರಡನೇ ಹೆಂಡತಿಗೆ ಗೊತ್ತಾಗಿದೆ. ಮದುವೆ ವಿಚಾರದಲ್ಲಿ ಶ್ರೀನಿವಾಸ ಸುಳ್ಳು ಹೇಳಿ ವಂಚಿಸಿದ್ದಾನೆ ಎಂದು ಗೊತ್ತಾದ ಬಳಿಕ ಅವರು 2016ರಲ್ಲಿ ಗ್ರಾಮೀಣ ಠಾಣೆಯಲ್ಲಿ ತನ್ನ ಪತಿಯ ವಿರುದ್ಧ ದೂರು ದಾಖಲಿಸಿದ್ದರು. ಮಹಿಳೆ ನೀಡಿದ ದೂರನ್ನು ಆಧರಿಸಿ ತನಿಖೆ ಕೈಗೊಂಡ ಗಂಗಾವತಿ ಗ್ರಾಮೀಣ ಠಾಣೆಯ ಆಗಿನ ಪಿಎಸ್ಐ ಪ್ರಕಾಶ ಮಾಳಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.