ರಾಯಚೂರು: ರಾಜೀವ್‌ಗಾಂಧಿ ಸೂಪರ್ ಸ್ಪೆಷಾಲಿಟಿ ಓಪೆಕ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಡೇ ಕೇರ್ ಕಿಮೋಥೆರೆಪಿ ವಿಭಾಗವನ್ನು ಆರಂಭಿಸಲಾಗುವುದು ಎಂದು ವಿಶೇಷಾಧಿಕಾರಿ ಡಾ. ರಮೇಶ್ ಸಿ. ಸಾಗರ್ ತಿಳಿಸಿದರು.
"ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜೀವಗಾಂಧಿ ಸೂಪರ್ ಸ್ಪೇಷಾಲಿಟಿ (ಓಪೆಕ್) ಆಸ್ಪತ್ರೆ ಹಾಗೂ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಭಾಗಿತ್ವದೊಂದಿಗೆ ಕ್ಯಾನ್ಸರ್‌ಗೆ ಸಂಬಂಧಪಟ್ಟಂತೆ ಡೇ ಕೇರ್ ಕಿಮೋಥೆರಪಿ ವಿಭಾಗವನ್ನು ಪ್ರಾರಂಭ ಮಾಡಲಾಗಿದೆ. ಕರ್ನಾಟಕದಲ್ಲೇ ಪ್ರಥಮವಾಗಿ ಜಿಲ್ಲಾ ಮಟ್ಟದಲ್ಲಿ ಕ್ಯಾನ್ಸರ್ ಡೇ ಕೇರ್ ಕಿಮೋಥೆರಪಿ ವಿಭಾಗವನ್ನು ನಮ್ಮ ಆಸ್ಪತ್ರೆಯಲ್ಲಿ ಆರಂಭಿಸುತ್ತಿರುವುದು ಸಂತಸದ ವಿಷಯವಾಗಿದೆ" ಎಂದು ತಿಳಿಸಿದರು.
"ಕ್ಯಾನ್ಸರ್ ರೋಗವನ್ನು ಮೂರು ವಿಧಾನಗಳಿಂದ ಗುಣಪಡಿಸಬಹುದಾಗಿದೆ. ಈಗ ನಮ್ಮ ಆಸ್ಪತ್ರೆಯಲ್ಲಿ ಸರ್ಜಿಕಲ್ ಆಂಕಾಲಜಿಯು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಮೆಡಿಕಲ್ ಆಂಕಾಲಜಿ ಚಿಕಿತ್ಸೆಯನ್ನು ಜನವರಿ 10ರಿಂದ ಪ್ರಾರಂಭಿಸಲಾಗಿದೆ. ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ರೇಡಿಯೇಷನ್ ಆಂಕಾಲಜಿ ವಿಭಾಗವನ್ನು ಪ್ರಾರಂಭಿಸುವ ಉದ್ದೇಶ ಹೊಂದಲಾಗಿದೆ" ಎಂದು ತಿಳಿಸಿದರು.
"ಮೆಡಿಕಲ್ ಆಂಕಾಲಜಿ ವೈದ್ಯರು ವಾರದಲ್ಲಿ ಮೂರರಿಂದ ನಾಲ್ಕು ದಿನ ಮತ್ತು ಪಿಡಿಯಾಟ್ರಿಕ್ ಆಂಕಾಲಜಿ ವೈದ್ಯರು ತಿಂಗಳಿಗೆ ಒಂದು ಬಾರಿ ನಮ್ಮ ಆಸ್ಪತ್ರೆಗೆ ಭೇಟಿ ನೀಡಿ ಉಚಿತವಾಗಿ ಚಿಕಿತ್ಸೆಯನ್ನು ನೀಡಲಿದ್ದಾರೆ. ಕಿಮೋಥೆರಪಿ ಚಿಕಿತ್ಸೆಗೆ ಸಂಬಂಧಪಟ್ಟ ಎಲ್ಲಾ ಔಷಧಿಗಳನ್ನು ಸರ್ಕಾರದ ಯೋಜನೆಗಳಾದ ಎಬಿ- ಎಆರ್‌ಕೆ, ಯೋಜನೆ, ಎಸ್.ಸಿ., ಎಸ್ಟಿ, ಯೋಜನೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಕಳೆದ ಮೂರು ತಿಂಗಳಿನಿಂದ ಆಸ್ಪತ್ರೆಗೆ ಬರುವ ಹೊರ ರೋಗಿಗಳ ಸಂಖ್ಯೆಯಲ್ಲಿ ಶೇ.50 ರಷ್ಟು ಹೆಚ್ಚಳವಾಗಿದ್ದು, ಒಳ ರೋಗಿಗಳ ಸಂಖ್ಯೆಯು 100ರ ಗಡಿ ದಾಟಲಿದೆ" ಎಂದರು.
"ಮೆಡಿಕಲ್ ಗ್ಯಾಸ್ಟ್ರೋ ವಿಭಾಗದಲ್ಲಿ ಇಆರ್ಸಿಪಿ ಸ್ಟೆಂಟಿಂಗ್ ವಿಧಾನವನ್ನು ಪ್ರಾರಂಭ ಮಾಡಲಾಗಿದೆ. ಮುಂದುವರೆದು ಸರ್ಜಿಕಲ್ ಗ್ಯಾಸ್ಟ್ರೋ ವಿಭಾಗದಲ್ಲಿ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಹಾಗೂ ಕಾರ್ಡಿಯೋಥೋರೆಸಿಕ್ ಸರ್ಜರಿ ಮತ್ತು ನ್ಯೂರೋ ಸರ್ಜರಿ ವಿಭಾಗಗಳನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಸರ್ಕಾರದ ಅನುಮೋದನೆ ದೊರೆತ ನಂತರ ಆ ವಿಭಾಗಗಳನ್ನು ಆದಷ್ಟು ಬೇಗನೇ ಪ್ರಾರಂಭಿಸಲಾಗುವುದು" ಎಂದು ತಿಳಿಸಿದರು.
ಇದನ್ನೂ ಓದಿ: KLE ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ: ಕ್ಯಾನ್ಸರ್ ಬಗ್ಗೆ ಅರಿವಿನ ತುರ್ತು ಅಗತ್ಯತೆ ಇದೆ - ರಾಷ್ಟ್ರಪತಿ ದ್ರೌಪದಿ ಮುರ್ಮು