ಕರ್ನಾಟಕ

karnataka

ETV Bharat / sports

ಮಹಿಳಾ ಐಪಿಎಲ್​: ಆರ್​ಸಿಬಿಗೆ ಸತತ 2ನೇ ಸೋಲು, ಅಗ್ರಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್ - ಮಹಿಳಾ ಐಪಿಎಲ್

ಮುಂಬೈ ಇಂಡಿಯನ್ಸ್ ವಿರುದ್ಧ ಆರ್​ಸಿಬಿ ಮಹಿಳೆಯರು ಸೋಲು ಕಾಣುವ ಮೂಲಕ ಐಪಿಎಲ್​ನಲ್ಲಿ 2ನೇ ಪರಾಜಯ ಕಂಡರು. ಮಾರ್ಚ್​ 4ರಂದು ಯುಪಿ ವಾರಿಯರ್ಸ್​ ವಿರುದ್ಧ ಮುಂದಿನ ಪಂದ್ಯ ನಡೆಯಲಿದೆ.

ಮಹಿಳಾ ಐಪಿಎಲ್
ಮಹಿಳಾ ಐಪಿಎಲ್

By PTI

Published : Mar 3, 2024, 7:18 AM IST

ಬೆಂಗಳೂರು:ಬಲಿಷ್ಠ ಮುಂಬೈ ಇಂಡಿಯನ್ಸ್​ ಮಹಿಳೆಯರ ಆಲ್​ರೌಂಡ್​ ಆಟದ ಮುಂದೆ ಬೆಂಗಳೂರು ರಾಯಲ್​ ಚಾಲೆಂಜರ್ಸ್​ ಮಹಿಳೆಯರ ಹೋರಾಟ ಸಾಕಾಗಲಿಲ್ಲ. ಇದರಿಂದ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ 7 ವಿಕೆಟ್​ಗಳ ಗೆಲುವು ಕಂಡರೆ, ಮಹಿಳಾ ಇಂಡಿಯನ್ಸ್​ ಪ್ರೀಮಿಯರ್ ಲೀಗ್‌ನಲ್ಲಿ (ಡಬ್ಲ್ಯೂಪಿಎಲ್​) ಆರ್​ಸಿಬಿ ಸತತ ಎರಡನೇ ಸೋಲು ಅನುಭವಿಸಿತು.

ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ಬ್ಯಾಟಿಂಗ್​ ವೈಫಲ್ಯ ಮತ್ತು ಮುಂಬೈ ಬಿಗಿ ದಾಳಿಗೆ ಸಿಲುಕಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 133 ರನ್​ ಮಾತ್ರ ಗಳಿಸಿತು. ಇದನ್ನು ನಾಟ್​ ಸೇವಿಯರ್​ ಬ್ರಂಟ್​ ನೇತೃತ್ವದ ತಂಡ 15 ಓವರ್​ಗಳಲ್ಲಿ ಮೂರೇ ವಿಕೆಟ್​ ಕಳೆದುಕೊಂಡು ದಾಟಿ ಗೆಲ್ಲುವ ಮೂಲಕ ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.

ಕೆರ್​, ಬಾಟಿಯಾ ಅಬ್ಬರ:ಆರ್​ಸಿಬಿ ಮಹಿಳೆಯರು ನೀಡಿದ ಸಾಧಾರಣ ಗುರಿ ಬೆನ್ನಟ್ಟಿದ ಮುಂಬೈ ಮಹಿಳೆಯರು ಬಿರುಸಿನ ಆಟವಾಡಿದರು. ಯಾಸ್ಟಿಕಾ ಭಾಟಿಯಾ (31) ಭರ್ಜರಿ ಆರಂಭ ನೀಡಿದರು. 4 ಬೌಂಡರಿ, 2 ಸಿಕ್ಸರ್​​ ಬಾರಿಸಿ ವಿಜೃಂಭಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅಮೆಲಿಯಾ ಕೆರ್​ ಆರ್‌ಸಿಬಿಯ ಪ್ರತಿ ಬೌಲರ್‌ಗಳನ್ನೂ ಬೆಂಡೆತ್ತಿದರು. ಕೇವಲ 24 ಎಸೆತಗಳಲ್ಲಿ ಔಟಾಗದೇ 40 ರನ್​ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಹೈಲಿ ಮ್ಯಾಥ್ಯೂವ್ಸ್​ 26, ನಾಯಕಿ ಬ್ರಂಟ್​ 27 ರನ್​ ಕಾಣಿಕೆ ನೀಡಿದರು.

ನಾಯಕಿ ಸ್ಮೃತಿ ಮಂಧಾನ ಅಲ್ಪ ಮೊತ್ತವನ್ನು ಉಳಿಸಿಕೊಳ್ಳಲು ಏನೇ ಕಸರತ್ತು ಮಾಡಿದರೂ ಗೆಲುವು ದಕ್ಕಲಿಲ್ಲ. ಇದಕ್ಕಾಗಿ ಅವರು 8 ಮಂದಿಯನ್ನು ಬೌಲಿಂಗ್​ಗೆ ಬಳಸಿಕೊಂಡರು. ಟ್ರಂಪ್​ ಕಾರ್ಡ್​ ರೇಣುಕಾ ಸಿಂಗ್​ 2 ಓವರ್​ನಲ್ಲಿ 25 ರನ್​ ನೀಡಿ ದುಬಾರಿಯಾದರೆ, ಎಲಿಸಿ ಪೆರ್ರಿ ಮಾತ್ರ 2 ಓವರ್​ನಲ್ಲಿ 10 ರನ್​ ನೀಡಿ ತುಸು ಬಿಗಿ ದಾಳಿ ನಡೆಸಿದರು.

ನೀರಸ ಬ್ಯಾಟಿಂಗ್​:ಇದಕ್ಕೂ ಮೊದಲು ಬ್ಯಾಟಿಂಗ್​ನಲ್ಲೂ ನೀರಸ ಪ್ರದರ್ಶನ ನೀಡಿದ ಆರ್​ಸಿಬಿ ಮಹಿಳೆಯರು ಮುಂಬೈ ಮಹಿಳೆಯರ ಕರಾರುವಾಕ್​ ದಾಳಿಗೆ ಸಿಲುಕಿದರು. ಎಲೆಸಿ ಪೆರ್ರಿ 44 ರನ್​ ಸಿಡಿಸಿದ್ದೇ ಅತ್ಯಧಿಕ ರನ್​ ಆಗಿತ್ತು. ಉಳಿದಂತೆ ಮಂಧಾನ 9, ಡಿವೈನ್​ 9, ಮೇಘನಾ 11, ಮೋಲಿನ್ಯುಕ್ಸ್​ 12, ವರೆಹಮ್​ 27 ರನ್​ ಗಳಿಸಿದರು. ನಾಯಕಿ ಬ್ರಂಟ್​, ಪೂಜಾ ವಸ್ತ್ರಕಾರ್​ ತಲಾ 2 ವಿಕೆಟ್​ ಕಿತ್ತರೆ, ಉಳಿದವರು 7ರ ಸರಾಸರಿಯಲ್ಲಿ ರನ್​ ನೀಡಿ ಆರ್​ಸಿಬಿ ಪಡೆಯನ್ನು ಕಟ್ಟಿಹಾಕಿದರು.

ಆರ್‌ಸಿಬಿಗೆ ಸತತ 2ನೇ ಸೋಲು:ಆರ್​ಸಿಬಿಗೆ ಇದು ಟೂರ್ನಿಯಲ್ಲಿ ಸತತ 2ನೇ ಸೋಲಾಗಿದೆ. ಮೊದಲು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಸೋತಿದ್ದ ತಂಡ ಆಡಿದ 4 ಪಂದ್ಯಗಳಲ್ಲಿ ತಲಾ 2 ಗೆಲುವು, ಸೋಲಿನೊಂದಿಗೆ ಪಾಯಿಂಟ್​ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್​ 4ರಲ್ಲಿ 3 ಗೆದ್ದು ಮೊದಲ ಸ್ಥಾನಕ್ಕೇರಿತು. ನಾಳೆ (ಮಾರ್ಚ್ 4) ಯುಪಿ ವಾರಿಯರ್ಸ್​ ವಿರುದ್ಧ ಆರ್​ಸಿಬಿ ಸೆಣಸಾಡಲಿದೆ.

ಇದನ್ನೂ ಓದಿ:ಲಖನೌ ತಂಡಕ್ಕೆ ಲ್ಯಾನ್ಸ್ ಕ್ಲುಸೆನರ್ ಸಹಾಯಕ ಕೋಚ್​ ಆಗಿ ನೇಮಕ

ABOUT THE AUTHOR

...view details