ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಇರಲಿ ಅಥವಾ ಮಹಿಳಾ ಪ್ರೀಮಿಯರ್ ಲೀಗ್ ಇರಲಿ ಪ್ರತೀ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಮೈದಾನಕ್ಕಿಳಿದರೆ ಸಾಕು ಕೋಟ್ಯಂತರ ಅಭಿಮಾನಿಗಳ ಬಾಯಿಯಿಂದ ಬರುವ ಏಕೈಕ ಪದ 'ಈ ಸಲ ಕಪ್ಪು ನಮ್ದೆ' ಎಂಬುದು. ಅಂತೂ ಇಂತೂ ಕೊನೆಗೂ ಅಭಿಮಾನಿಗಳ ಈ ಬಯಕೆಯನ್ನು ನಿನ್ನೆ ಮಹಿಳಾ ತಂಡ ನಿಜವಾಗಿಸಿತು. ಚೊಚ್ಚಲ ಬಾರಿಗೆ ಡಬ್ಲೂಪಿಎಲ್ ಟೈಟಲ್ ಗೆದ್ದುಕೊಂಡ ಆರ್ಸಿಬಿ, ಈ ಸಲ ಕಪ್ಪು ನಮ್ದೆಂದು ಬೀಗಿತು.
ಕಳೆದ ಸೀಸನ್ಲ್ಲಿ ಕೇವಲ 2 ಪಂದ್ಯಗಳನ್ನು ಗೆದ್ದು ಕ್ವಾಲಿಫೈ ಆಗದೇ ಹೊರನಡೆದಿದ್ದ ಮಂಧಾನ ಪಡೆ ಛಲಬಿಡದೆ ಈ ಬಾರಿ ಟ್ರೋಫಿ ಜಯಿಸಲೇಬೇಕೆಂದು ಪಣ ತೊಟ್ಟು ಮೈದಾನಕ್ಕಿಳಿದಿತ್ತು. ತಮ್ಮ ಸಂಕಲ್ಪದಂತೆ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಸಿಂಹಿಣಿಯರು ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮಣಿಸಿ ಟ್ರೋಫಿ ಗೆದ್ದು ಅಭಿಮಾನಿಗಳ 16 ವರ್ಷದ ಕನಸು ನನಸಾಗಿಸಿದರು.
ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್ಸಿಬಿ ನಾಯಕಿ ಸ್ಮೃತಿ ಮಂಧಾನ ಮಾತನಾಡಿ, ತಂಡವನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. "ಆರ್ಸಿಬಿಯ ನಿಷ್ಠಾವಂತ ಅಭಿಮಾನಿಗಳು ಪ್ರತೀ ಬಾರಿ ತಂಡ ಕಣಕ್ಕಿಳಿದಾಗ 'ಈ ಸಲ ಕಪ್ ನಮ್ದೆ' ಎಂದು ಹೇಳುತ್ತಾರೆ. ಆದರೆ 'ಈ ಬಾರಿ ಕಪ್ ನಮ್ದಾಗಿದೆ. ಖಂಡಿತವಾಗಿಯೂ ಈ ಗೆಲುವು ಅಗ್ರ ಐದು ಟ್ರೋಫಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ವಿಶ್ವಕಪ್ ಮೊದಲ ಸ್ಥಾನದಲ್ಲಿದೆ. ಇದು ತಂಡದ ನಾಯಕಿಯಾಗಿರುವ ನನ್ನ ಗೆಲುವಲ್ಲ, ನಮ್ಮ ತಂಡದ ಗೆಲುವು" ಎಂದರು.