ಕರ್ನಾಟಕ

karnataka

ETV Bharat / sports

WPL Final: ಮಂಧಾನ ಪಡೆಗೆ ಲ್ಯಾನಿಂಗ್ ತಂಡದ ಸವಾಲು: ಚೊಚ್ಚಲ ಕಪ್​ ಗೆಲ್ಲುತ್ತಾ ಆರ್​ಸಿಬಿ?

ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಣಕ್ಕಿಳಿಯಲಿವೆ.

wpl 2024 final
ಮಹಿಳಾ ಪ್ರೀಮಿಯರ್ ಲೀಗ್ ಫೈನಲ್

By ETV Bharat Karnataka Team

Published : Mar 17, 2024, 4:15 PM IST

ನವದೆಹಲಿ:ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿಂದು ಮಹಿಳಾ ಪ್ರೀಮಿಯರ್ ಲೀಗ್ (WPL) 2024 ರ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮೆಗ್ ಲ್ಯಾನಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿವೆ.

ಎಲಿಮಿನೇಟರ್​ ಹಣಾಹಣಿಯಲ್ಲಿ ಎಲ್ಲಿಸ್​ ಪೆರ್ರಿ (66 ರನ್​) ಬ್ಯಾಟಿಂಗ್​ನಲ್ಲಿ ಮಿಂಚಿದರೆ, ಬಳಿಕ ಬೌಲರ್​​ಗಳು ಕರಾರುವಾಕ್​ ದಾಳಿ ನಡೆಸಿದ್ದರಿಂದ ಆರ್​ಸಿಬಿ ತಂಡವು ಮೊದಲ ಸಲ ಅಂತಿಮ ಘಟ್ಟ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂತಿಮ ಓವರ್​ ಎಸೆದ ಆಲ್‌ರೌಂಡರ್ ಆಶಾ ಸೋಭನಾ ಅದ್ಭುತ ಬೌಲಿಂಗ್​ ಪ್ರದರ್ಶನ ತೋರಿದ್ದರು. ಮುಂಬೈ ಗೆಲುವಿಗೆ 12 ರನ್​ ಬೇಕಿದ್ದಾಗ ಕೇವಲ 6 ರನ್​ ನೀಡಿ, ಬೆಂಗಳೂರಿಗೆ ಗೆಲುವು ತಂದುಕೊಟ್ಟಿದ್ದರು.

ಮತ್ತೊಂದೆಡೆ, ಬ್ಯಾಟರ್ ಜೆಮಿಮಾ ರಾಡ್ರಿಗಸ್ ದೆಹಲಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಫ್ರಾಂಚೈಸಿಯು ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲು ಜೆಮಿಮಾ ಕೊಡುಗೆ ಅಮೂಲ್ಯವಾಗಿದೆ. ಕೊನೆಯ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ರಾಡ್ರಿಗಸ್ 38*, 58, 17 ಮತ್ತು 69* ರನ್ ಬಾರಿಸಿದ್ದಾರೆ. ಪಂದ್ಯದ ಪ್ರಮುಖ ಘಟ್ಟದಲ್ಲಿ ಭರ್ಜರಿ ಬ್ಯಾಟಿಂಗ್​ ಮೂಲಕ ಈ ಋತುವಿನಲ್ಲಿ ತಂಡಕ್ಕೆ ಶಕ್ತಿ ತುಂಬಿದ್ದಾರೆ.

ಕ್ಯಾಪಿಟಲ್ಸ್​​ ವಿರುದ್ದ ಗೆದ್ದಿಲ್ಲ ಆರ್​ಸಿಬಿ:WPLನ ಮೊದಲ ಆವೃತ್ತಿಯಿಂದಲೂ ಮಂಧಾನ ತಂಡವು ಎಲ್ಲ ನಾಲ್ಕು ಬಾರಿಯೂ ಕ್ಯಾಪಿಟಲ್ಸ್ ವಿರುದ್ಧ ಸೋತಿದೆ. ಕಳೆದ ಬಾರಿ ಫೈನಲ್​ಗೇರಿದ್ದ ಡೆಲ್ಲಿ ವಿರುದ್ಧ ಇದುವರೆಗೂ ಬೆಂಗಳೂರು ತಂಡ ಗೆದ್ದಿಲ್ಲ. ಕೊನೆಯದಾಗಿ ಮುಖಾಮುಖಿಯಾಗಿದ್ದಾಗಲೂ ಸಹ 1 ರನ್​ನಿಂದ ಡೆಲ್ಲಿ ಜಯದ ನಗು ಬೀರಿತ್ತು. ಗ್ರೂಪ್​ ಹಂತದ ಪಂದ್ಯಗಳ ಅಂತ್ಯದ ಬಳಿಕ ಕ್ಯಾಪಿಟಲ್ಸ್​ ತಂಡ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಫೈನಲ್​​ಗೇರಿದೆ. ಮೆಗ್​​ ಲ್ಯಾನಿಂಗ್ ನೇತೃತ್ವದ ತಂಡವು 8 ಲೀಗ್ ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಬೀಗಿದೆ. ಮುಂಬೈ ವಿರುದ್ಧ ಎಲಿಮಿನೇಟರ್​ ಪಂದ್ಯ ಆಡಿದ್ದ ಆರ್​​ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು.

ಎಲಿಮಿನೇಟರ್​ ಪಂದ್ಯವನ್ನು ಗಮನಿಸಿದರೆ, ಪಂದ್ಯದುದ್ದಕ್ಕೂ ಬೆಂಗಳೂರು ವನಿತೆಯರು ಹಿನ್ನಡೆಯಲ್ಲೇ ಇದ್ದರು. ಆದರೆ ರನ್​​ ರೇಟ್​​ ನಿಯಂತ್ರಣದಲ್ಲಿಟ್ಟ ಕಾರಣ ಕೊನೆಯಲ್ಲಿ ಗೆಲುವಿಗೆ ನೆರವಾಯಿತು. ಮುಂಬೈ ತಂಡಕ್ಕೆ ಅಂತಿಮ ಓವರ್​ಗಳಲ್ಲಿ ಬೌಂಡರಿ ಗಳಿಸಲು ಅವಕಾಶ ನೀಡಿರಲಿಲ್ಲ. ಇದರಿಂದ ಆರ್​ಸಿಬಿ 5 ರನ್‌ಗಳ ಗೆಲುವು ಕಂಡಿತ್ತು.

ಪೆರ್ರಿ-ಲ್ಯಾನಿಂಗ್ ಬ್ಯಾಟಿಂಗ್​ ಬಲ:ಟೂರ್ನಿಯಲ್ಲಿ ಬೆಂಗಳೂರು ಪರ ಅದ್ಭುತ ಪ್ರದರ್ಶನ ತೋರಿರುವ ಸ್ಟಾರ್​ ಆಲ್​ರೌಂಡರ್​ ಎಲ್ಲಿಸ್​ ಪೆರ್ರಿ 8 ಪಂದ್ಯಗಳಿಂದ 312 ರನ್ ​ಬಾರಿಸಿ ಅಗ್ರಸ್ಥಾನದಲ್ಲಿದ್ದರೆ, ಡೆಲ್ಲಿ ಪರ ನಾಯಕಿ ಮೆಗ್​ ಲ್ಯಾನಿಂಗ್ 8 ಪಂದ್ಯಗಳಲ್ಲಿ​ 308 ರನ್​ ಪೇರಿಸಿ ತಂಡಕ್ಕೆ ನೆರವಾಗಿದ್ದಾರೆ. ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ 269 ರನ್​ ಗಳಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬೌಲಿಂಗ್​ನಲ್ಲಿ ಡೆಲ್ಲಿ ತಂಡಕ್ಕೆ ಮರಿಝಾನ್ನೆ ಕಪ್​ 6 ಪಂದ್ಯಗಳಿಂದ 11 ವಿಕೆಟ್​ ಪಡೆದು ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದು, ತಂಡದ ಯಶಸ್ಸಿಗೆ ನೆರವಾಗಿದ್ದಾರೆ.

ಪಂದ್ಯದ ಪೂರ್ವದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಚಾಲೆಂಜರ್ಸ್​ ನಾಯಕಿ ಸ್ಮೃತಿ, ''ಆಟಗಾರ್ತಿಯರು ಒತ್ತಡ ಅನುಭವಿಸದಂತೆ ಮನವಿ ಮಾಡಿದ್ದಾರೆ. ಇದು ಕೇವಲ ಎರಡನೇ ಋತುವಾಗಿದೆ. ಪುರುಷರ ತಂಡವು 15 ವರ್ಷಗಳಿಂದಲೂ ಆಡುತ್ತಿದೆ'' ಎಂದು ಅವರು ಹೇಳಿದ್ದಾರೆ.

ಎರಡೂ ತಂಡಗಳು ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದು, ರೋಚಕ ಹಣಾಹಣಿಯ ನಿರೀಕ್ಷೆ ಅಭಿಮಾನಿಗಳದ್ದಾಗಿದೆ. ಟಾಸ್​​ ಕೂಡ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಪಂದ್ಯವು ಸಂಜೆ 7.30ಕ್ಕೆ ಆರಂಭವಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು:ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ದಿಶಾ ಕಸತ್, ರಿಚಾ ಘೋಷ್ (ವಿ.ಕೀ), ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕಾ ಪಾಟೀಲ್, ಆಶಾ ಸೊಭನಾ, ಶ್ರದ್ಧಾ ಪೋಖರ್ಕರ್, ರೇಣುಕಾ ಠಾಕೂರ್ ಸಿಂಗ್, ಸಿಮ್ರಾನ್ ಠಾಕೂರ್ ಸಿಂಗ್, ಶುಭಾ ಸತೀಶ್, ಸಬ್ಬಿನೇನಿ ಮೇಘನಾ, ನಡಿನ್ ಡಿ ಕ್ಲರ್ಕ್, ಕೇಟ್ ಕ್ರಾಸ್, ಏಕ್ತಾ ಬಿಸ್ತ್​​.

ದೆಹಲಿ ಕ್ಯಾಪಿಟಲ್ಸ್:ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ಜೆಸ್ ಜೊನಾಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ (ವಿ.ಕೀ), ಶಿಖಾ ಪಾಂಡೆ, ಮಿನ್ನು ಮಣಿ, ಅಶ್ವನಿ ಕುಮಾರಿ, ಅಪರ್ಣಾ ಮೊಂಡಲ್, ಟೈಟಾಸ್ ಸಧು, ಸ್ನೇಹಾ ದೀಪ್ತಿ, ಅನ್ನಾಬೆಲ್ ಸದರ್ಲ್ಯಾಂಡ್, ಲಾರಾ ಹ್ಯಾರಿಸ್, ಪೂನಂ ಯಾದವ್.

ಇದನ್ನೂ ಓದಿ:WPL Final: ಆರ್​​ಸಿಬಿ ಸವಾಲು ಎದುರಿಸಲು ನಾವು ಸಿದ್ಧ: ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಲ್ಯಾನಿಂಗ್

ABOUT THE AUTHOR

...view details