ಬೆಂಗಳೂರು : ಡಬ್ಲ್ಯುಪಿಎಲ್‌ನ ಎರಡನೇ ಋತು ಆರಂಭವಾಗಿದೆ. ಭಾನುವಾರ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರುವ ಪಂದ್ಯದ ಮೂಲಕ ಅದಾನಿ ಸ್ಪೋರ್ಟ್ಸ್‌ಲೈನ್ ಮಾಲೀಕತ್ವದ ಗುಜರಾತ್ ಜೈಂಟ್ಸ್ ತಂಡ ಟೂರ್ನಿಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದೆ.
ಆಸ್ಟ್ರೇಲಿಯಾದ ರನ್ ಮಷಿನ್ ಬೆತ್ ಮೂನಿ ನಾಯಕತ್ವದಲ್ಲಿ ಗುಜರಾತ್ ತಂಡ ಈ ವರ್ಷ ಅಬ್ಬರಿಸಲು ಉತ್ಸುಕವಾಗಿದೆ. ಡಬ್ಲ್ಯುಪಿಎಲ್ ಸೀಸನ್ ಎರಡರ ಪೂರ್ವಸಿದ್ಧತೆಯ ಕುರಿತು ತಂಡದ ಮುಖ್ಯ ಕೋಚ್ ಮೈಕೆಲ್ ಕ್ಲಿಂಗರ್, ಮೆಂಟರ್ ಮಿಥಾಲಿ ರಾಜ್, ನಾಯಕಿ ಬೆತ್ ಮೂನಿ ಮತ್ತು ಉಪನಾಯಕಿ ಸ್ನೇಹಾ ರಾಣಾ ಸುದೀರ್ಘವಾಗಿ ಮಾತನಾಡಿದ್ದಾರೆ.
ತಂಡದ ಸಮತೋಲನ ಹಾಗೂ ಋಣಾತ್ಮಕ ತಯಾರಿಯ ಕುರಿತು ಮಾತನಾಡಿದ ಮೂನಿ ''ಡಬ್ಲ್ಯುಪಿಎಲ್‌ಗಾಗಿ ನಾವು ಕೆಲ ಸಮಯದಿಂದ ಒಟ್ಟಿಗೆ ಇರುವುದರಿಂದ ತಂಡದಲ್ಲಿ ಅತ್ಯುತ್ತಮ ವೈಬ್ ಇದೆ. ಕಳೆದ ಕೆಲ ದಿನಗಳಿಂದ ಕೆಲವು ನಿರ್ದಿಷ್ಟ ವಿಷಯಗಳ ಮೇಲೆ ನಾವು ಕೇಂದ್ರೀಕೃತವಾಗಿ ಕೆಲಸ ಮಾಡಿದ್ದು, ಅವು ಕಾರ್ಯರೂಪಕ್ಕೆ ಬಂದಿವೆ. ಆದ್ದರಿಂದ ನಮ್ಮ ಮೊದಲ ಪಂದ್ಯಕ್ಕಾಗಿ ಕಾತರರಾಗಿದ್ದೇವೆ. ನಾಳೆ ರಾತ್ರಿ ಮೈದಾನಕ್ಕಿಳಿಯುವ ನಮ್ಮ 11 ಆಟಗಾರರು ಈ ತಯಾರಿಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಾರೆ ಹಾಗೂ ಅದನ್ನೇ ಮುಂದುವರೆಸಲಿದ್ದಾರೆ'' ಎಂದು ಅಭಿಪ್ರಾಯಪಟ್ಟರು.
ಮೊದಲ ಸೀಸನ್ ಆರಂಭದಲ್ಲೇ ನಾಯಕಿ ಮೂನಿ ಗಾಯಗೊಂಡು ಹೊರಗುಳಿದ ಬಳಿಕ ಗುಜರಾತ್ ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದ ಉಪನಾಯಕಿ ಸ್ನೇಹಾ ರಾಣಾ ಮಾತನಾಡಿ ''ಇಲ್ಲಿಯವರೆಗೆ ನಾವು ಉತ್ತಮ ಅನುಭವವನ್ನು ಹೊಂದಿದ್ದೇವೆ ಮತ್ತು ಆಟಗಾರರಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ಅದಾನಿ ಸ್ಪೋರ್ಟ್ಸ್‌ಲೈನ್ ಖಚಿತಪಡಿಸಿದೆ. ತಂಡದಲ್ಲಿ ಎಲ್ಲರೂ ಸಕಾರಾತ್ಮಕವಾಗಿದ್ದೇವೆ. ನಾವು ಸಾಕಷ್ಟು ಉತ್ತಮ ಪ್ರದರ್ಶನ ನೀಡಿದ್ದೇವೆ ಮತ್ತು ಈ ಪಂದ್ಯಾವಳಿಯಲ್ಲಿ ಉತ್ತಮ ಆರಂಭವನ್ನು ನಿರೀಕ್ಷಿಸುತ್ತಿದ್ದೇವೆ'' ಎಂದರು.
ಅಲ್ಲದೆ ಬೆಂಗಳೂರು ಮತ್ತು ನವದೆಹಲಿಯಲ್ಲಿ ಡಬ್ಲ್ಯುಪಿಎಲ್‌ನ ಎರಡನೇ ಋತು ಆಯೋಜನೆಯಾಗಿರುವುದರ ಬಗ್ಗೆ ಮಾತನಾಡುತ್ತ, ''ನಾವು ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿರುವುದರಿಂದ ವಿವಿಧ ನಗರಗಳಲ್ಲಿ ಡಬ್ಲ್ಯುಪಿಎಲ್ ನಡೆಯುತ್ತಿರುವುದು ಒಳ್ಳೆಯದು" ಎಂದು ಹೇಳಿದರು.
ತಂಡದ ಮೆಂಟರ್, ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಮಾತನಾಡುತ್ತ ''ಡಬ್ಲ್ಯುಪಿಎಲ್ ಪ್ರತಿ ನಗರದಲ್ಲಿಯೂ ಆಯೋಜನೆಗೊಂಡರೆ ಫ್ರಾಂಚೈಸಿಗೆ ಹೊಸ ಪ್ರೇಕ್ಷಕರನ್ನು ಅಭಿವೃದ್ಧಿಪಡಿಸುವ ಅವಕಾಶ ಸಿಗುತ್ತದೆ. ಇದರಿಂದ ಮಾತ್ರ ಟೂರ್ನಿ ಹಾಗೂ ಫ್ರಾಂಚೈಸಿಗೆ ಮತ್ತಷ್ಟು ಮೆರುಗು ಸಿಗಲು ಸಾಧ್ಯ. ಡಬ್ಲ್ಯುಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ಗುಜರಾತ್ ಜೈಂಟ್ಸ್‌ನೊಂದಿಗೆ ಕೆಲಸ ಮಾಡುವುದದನ್ನು ನಾನು ಆನಂದಿಸುತ್ತಿದ್ದೇನೆ. ಯುವ ಆಟಗಾರರೊಂದಿಗೆ ಕೆಲಸ ಮಾಡುತ್ತಿದ್ದೇನೆ. ನನ್ನ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದೇನೆ. ಅವರು ಉತ್ತಮ ಜಾಗದಲ್ಲಿ ಉಳಿಯಲು ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ತಮ್ಮ ಪಾತ್ರಗಳನ್ನು ನಿರ್ವಹಿಸಲು ಸಹಾಯ ಮಾಡುತ್ತಿದ್ದೇನೆ" ಎಂದು ಅವರು ತಿಳಿಸಿದರು.
ಇದನ್ನೂ ಓದಿ :ಮಹಿಳಾ ಪ್ರೀಮಿಯರ್ ಲೀಗ್: ಕೊನೆಯ ಎಸೆತದಲ್ಲಿ ಸಂಜನಾ ಸಿಕ್ಸರ್: ಡೆಲ್ಲಿ ವಿರುದ್ಧ ಮುಂಬೈ ಶುಭಾರಂಭ