ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ 2024 ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಮಾರ್ಚ್ 17 ರಂದು ಭಾನುವಾರ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದ್ದು, ದೆಹಲಿಯ ಅರುಣ್ ಜೆಟ್ಲಿ ಮೈದಾನ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಐಪಿಎಲ್ ನಲ್ಲಿ ಪುರುಷರ ಆರ್ಸಿಬಿ ತಂಡ ಕಪ್ಗಾಗಿ ಹವಣಿಸುತ್ತಿದ್ದು, ಈ ಬರವನ್ನು ಮಹಿಳಾ ತಂಡ ನೀಗಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
ಇನ್ನು ಇದೇ ಮೈದಾನದಲ್ಲಿ ಶುಕ್ರವಾರ ಜರುಗಿದ ಎಲಿಮಿನೇಟರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳೆಯರ ಪ್ರೀಮಿಯರ್ ಲೀಗ್ನಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 130 ರನ್ ಗಳಿಸಲಷ್ಟೇ ಶಕ್ತವಾಯಿತು. ಬೆಂಗಳೂರು ಈ ಮೂಲಕ 5 ರನ್‌ಗಳ ಗೆಲುವಿನೊಂದಿಗೆ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಫೈನಲ್ ತಲುಪಿತು.
ಸೋಫಿ ಡಿವೈನ್ (10) ಮತ್ತು ಸ್ಮೃತಿ ಮಂಧಾನ (10), ದಿಶಾ ಕಸಟ್ (0) ಒಬ್ಬರ ಹಿಂದೊಬ್ಬರಂತೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರೆ, ಅಲಿಸ್ಸಾ ಪೆರ್ರಿ ಮತ್ತೊಮ್ಮೆ ಬೆಂಗಳೂರು ಪರ ಅದ್ಭುತ ಪ್ರದರ್ಶನ ನೀಡಿದರು. 50 ಎಸೆತಗಳಲ್ಲಿ 8 ಬೌಂಡರಿ, ಒಂದು ಸಿಕ್ಸರ್ ಸಹಿತ 66 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು ಗರಿಷ್ಠ ಮೊತ್ತಕ್ಕೆ ತಂದು ನಲ್ಲಿಸಿದರು. ಪೆರ್ರಿ ಹೊರತುಪಡಿಸಿ, ರಿಚಾ ಘೋಷ್ (14), ಮೊಲನೂ (11) ಮತ್ತು ಜಾರ್ಜಿಯಾ (ಅಜೇಯ 18) ಕೂಡ ತಂಡದ ಸ್ಕೋರ್ಗೆ ಕೊಡುಗೆ ನೀಡಿದರು.
ಬೆಂಗಳೂರು ನೀಡಿದ್ದ 136 ರನ್ ಗಳ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ಮೊದಲ 3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 22 ರನ್ ಗಳಿಸಿತ್ತು. ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ ಗರಿಷ್ಠ 33 ರನ್ ಗಳಿಸಿದರು. 18ನೇ ಓವರ್‌ನಲ್ಲಿ ಔಟಾದ ನಂತರ ಇಡೀ ಪಂದ್ಯ ಬೆಂಗಳೂರಿನತ್ತ ವಾಲಿತು. ಕೊನೆಯ ಓವರ್‌ನಲ್ಲಿ ಮುಂಬೈ ಗೆಲುವಿಗೆ 6 ಎಸೆತಗಳಲ್ಲಿ 12 ರನ್‌ಗಳ ಅಗತ್ಯವಿತ್ತು. ಪೂಜಾ ವಸ್ತ್ರಾಕರ್ ಮತ್ತು ಅಮೆಲಿಯಾ ಕೆರ್ ಕ್ರೀಸ್ನಲ್ಲಿದ್ದರು. ಮೊದಲ 3 ಎಸೆತಗಳಲ್ಲಿ ಕೇವಲ 4 ರನ್ ಗಳಿಸಲಾಯಿತು. ನಾಲ್ಕನೇ ಎಸೆತದಲ್ಲಿ ಪೂಜಾ (4) ಔಟಾದರೇ ಮುಂದಿನ ಎರಡು ಎಸೆತಗಳಲ್ಲೂ ಬೌಂಡರಿ ಗಳಿಸಲು ಸಾಧ್ಯವಾಗದೆ ಮುಂಬೈ 5 ರನ್ಗಳಿಂದ ಸೋಲಿಗೆ ಶರಣಾಯಿತು. ಕೊನೆಯ ಎಸೆತದಲ್ಲಿ ಗೆಲುವಿಗೆ 7 ರನ್‌ಗಳ ಅಗತ್ಯವಿತ್ತು. ಅದರಲ್ಲಿ ಮುಂಬೈ ಕೇವಲ 2 ರನ್ ಗಳಿಸಲಷ್ಟೇ ಶಕ್ತವಾಯಿತು.