ಹೈದರಾಬಾದ್:ಪುರುಷರ ಟಿ20 ಕ್ರಿಕೆಟ್ ಬಳಿಕ ಮಹಿಳೆಯರ ಕ್ರಿಕೆಟ್ ಹಂಗಾಮ ಶುರುವಾಗಲಿದೆ. 2024ರ ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ) ಭಾನುವಾರ ಬಿಡುಗಡೆ ಮಾಡಿದೆ.
ಈ ಬಾರಿಯ ಚುಟುಕು ಮಾದರಿಯ ಟೂರ್ನಿಯ ಆತಿಥ್ಯವನ್ನು ಬಾಂಗ್ಲಾದೇಶ ವಹಿಸಿಕೊಂಡಿದೆ. ಅಕ್ಟೋಬರ್ 6 ರಂದು ಪಂದ್ಯಾವಳಿಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಒಟ್ಟು 10 ತಂಡಗಳು ಭಾಗವಹಿಸಲಿವೆ. 8 ತಂಡಗಳು ನೇರ ಅರ್ಹತೆ ಪಡೆದಿದ್ದರೆ, ಇನ್ನೆರಡು ತಂಡಗಳು ಅರ್ಹತಾ ಪಂದ್ಯಗಳ ಮೂಲಕ ಅಂತಿಮ ಪಟ್ಟಿಗೆ ಸೇರಲಿವೆ. ಈಗಾಗಲೇ ಅರ್ಹತಾ ಪಂದ್ಯಗಳು ದುಬೈನಲ್ಲಿ ನಡೆಯುತ್ತಿವೆ.
ತಂಡಗಳ ವಿಭಜನೆ ಹೀಗಿದೆ:10 ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ ಮಹಿಳಾ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಜೊತೆಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅರ್ಹತೆ ಪಡೆಯುವ ತಂಡ ಇರಲಿದೆ. ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ಅರ್ಹತಾ ತಂಡ ಸ್ಥಾನ ಪಡೆದಿವೆ.
ಅಕ್ಟೋಬರ್ 3 ರಂದು ಢಾಕಾ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3:00 ಗಂಟೆಗೆ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಬಳಿಕ ಆತಿಥೇಯ ಬಾಂಗ್ಲಾದೇಶ ಅದೇ ದಿನ ಸಂಜೆ 7 ಗಂಟೆಗೆ ಢಾಕಾದಲ್ಲೇ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ರನ್ನರ್ ಅಪ್ ತಂಡವನ್ನು ಎದುರಿಸಲಿದೆ.