ಹೈದರಾಬಾದ್: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಹಾಗು ವಿಕೆಟ್ ಕೀಪರ್ ರಿಷಭ್ ಪಂತ್ ಇಂದು 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಪಂತ್ ಇಂದು ಭಾರತ ತಂಡದ ಯಶಸ್ವಿ ಆಟಗಾರನಾಗಿ ಖ್ಯಾತಿ ಗಳಿಸಿದ್ದಾರೆ.
2022ರಲ್ಲಿ ಕಾರು ಅಪಘಾತಕ್ಕೆ ತುತ್ತಾಗಿ ದೀರ್ಘಕಾಲದವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿದ್ದ ಪಂತ್ ಇದೀಗ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ನೊಂದಿಗೆ ಪುನರಾಗಮನ ಮಾಡಿದ್ದಾರೆ. ಯುವ ಬ್ಯಾಟರ್ ತಮ್ಮ ಬ್ಯಾಟಿಂಗ್ ಮತ್ತು ಕೀಪಿಂಗ್ ಮೂಲಕ ಕ್ರಿಕೆಟ್ನಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಹಾಗಾದರೆ, ಬನ್ನಿ ಪಂತ್ ತಮ್ಮ ವೃತ್ತಿಜೀವನದಲ್ಲಿ ಸಾಧಿಸಿದ 5 ಅಪರೂಪದ ದಾಖಲೆಗಳು ಯಾವುವೆಂದು ತಿಳಿಯೋಣ.
ಪಂತ್ ದಾಖಲೆಗಳು:2018ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದ ಮೂಲಕ ಪಂತ್ ಅಂತಾರಾಷ್ಟ್ರೀಯ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಪಂದ್ಯದಲ್ಲಿ ಸಹಜವಾಗಿ ಆಟಗಾರನ ಮೇಲೆ ಒತ್ತಡ ಹೆಚ್ಚಿರುತ್ತದೆ. ಆದ್ರೆ ಪಂತ್ ಪದಾರ್ಪಣೆ ಪಂದ್ಯದಲ್ಲೇ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಅಪರೂಪದ ದಾಖಲೆ ಬರೆದಿದ್ದಾರೆ. ಇದೇ ಸರಣಿಯ 5ನೇ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು. ಇದರೊಂದಿಗೆ ಇಂಗ್ಲೆಂಡ್ ನೆಲದಲ್ಲಿ ನಡೆದ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಒಂದೇ ಟೆಸ್ಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್:ರಿಷಭ್ ಪಂತ್ ಒಂದೇ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ದಾಖಲೆಯನ್ನೂ ಸಹ ಹೊಂದಿದ್ದಾರೆ. 2018ರಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಅಡಿಲೇಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪಂತ್ ಎರಡು ಇನ್ನಿಂಗ್ಸ್‌ನಲ್ಲಿ 11 ಕ್ಯಾಚ್ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ನ ಜಾಕ್ ರಸೆಲ್ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ದಾಖಲೆ ಸರಿಗಟ್ಟಿದ್ದಾರೆ.
ಸಿಡ್ನಿಯಲ್ಲಿ ಶತಕ ವೈಭವ:2019ರಲ್ಲಿ ಸಿಡ್ನಿ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಪಂತ್ 159ರನ್ ಚಚ್ಚಿದ್ದರು. ಇದರೊಂದಿಗೆ ಆಸ್ಟ್ರೇಲಿಯಾ ನೆಲದಲ್ಲಿ ಶತಕ ಸಿಡಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡರು.
ಗಬ್ಬಾ ಕಿಂಗ್:2021ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ಐತಿಹಾಸಿಕ ಗೆಲುವು ಸಾಧಿಸಿತ್ತು. ಗಬ್ಬಾ ಮೈದಾನದಲ್ಲಿ 3 ದಶಕಗಳಿಗೂ ಹೆಚ್ಚು ಕಾಲ ಅಜೇಯರಾಗಿದ್ದ ಆಸೀಸ್‌ಗೆ ಭಾರತ ಸೋಲಿನ ರುಚಿ ತೋರಿಸಿತ್ತು. ಈ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ 3 ವಿಕೆಟ್‌ಗಳಿಂದ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಯಶಸ್ಸಿನಲ್ಲಿ ರಿಷಬ್ ಪಂತ್ ಪ್ರಮುಖ ಪಾತ್ರ ವಹಿಸಿದ್ದರು. ನಾಲ್ಕನೇ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಪಂತ್ ಅಜೇಯವಾಗಿ 89 ರನ್ ಗಳಿಸಿ ಟೀಂ ಇಂಡಿಯಾಗೆ ಜಯ ತಂದುಕೊಟ್ಟಿದ್ದರು. ಇದು ಪಂತ್ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ. ಪಂತ್ ಬ್ಯಾಟಿಂಗ್ ಮಾತ್ರವಲ್ಲದೆ ಕೀಪಿಂಗ್‌ನಲ್ಲೂ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರು ಟೆಸ್ಟ್‌ನಲ್ಲಿ ವೇಗವಾಗಿ 50 ಆಟಗಾರರನ್ನು ಪೆವಿಲಿಯನ್‌ಗೆ ಕಳಿಸಿದ ವಿಕೆಟ್‌ಕೀಪರ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮಹಿಳಾ ಟಿ20 ವಿಶ್ವಕಪ್: ಇಂದು ಸಂಜೆ ಭಾರತ-ನ್ಯೂಜಿಲೆಂಡ್ ಪಂದ್ಯ - India vs New Zealand Match