ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ಇಂದು 36ನೇ ವರ್ಷದ ಹುಟ್ಟುಹಬ್ಬ. ಕಳೆದ 16 ವರ್ಷಗಳಿಂದ ಕ್ರಿಕೆಟ್ ಜಗತ್ತಿನಲ್ಲಿ ಮಿಂಚುತ್ತಿರುವ ಕೊಹ್ಲಿ, ಹಲವಾರು ದಾಖಲೆಗಳನ್ನು ಬರೆದಿದ್ದಾರೆ ಮತ್ತು ಮುರಿದಿದ್ದಾರೆ. ಈ ಹಿನ್ನೆಲೆಯಲ್ಲಿ ದಾಖಲೆಗಳ ಸರದಾರ, ರನ್ ಮಷಿನ್ ಎಂದೆಲ್ಲ ಅಭಿಮಾನಿಗಳು ಬಿರುದಾವಳಿ ನೀಡಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ 50 ಶತಕ:ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿ ದಾಖಲೆ ಬರೆದಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್ 463 ಏಕದಿನ ಪಂದ್ಯಗಳಲ್ಲಿ 49 ಶತಕಗಳನ್ನು ಬಾರಿಸಿದ್ದರೆ, ವಿರಾಟ್ ಕೇವಲ 295 ಪಂದ್ಯಗಳಲ್ಲೇ 50 ಶತಕಗಳನ್ನು ಪೂರೈಸಿದ್ದಾರೆ.
80 ಅಂತಾರಾಷ್ಟ್ರೀಯ ಶತಕ:ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಲ್ಲಿದೆ. ಅವರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 100 ಶತಕಗಳನ್ನು ಪೂರೈಸಿದ್ದಾರೆ. ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ. ಇವರು ಇದುವರೆಗೆ ಒಟ್ಟು 80 ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ.
ಶೂನ್ಯ ಎಸೆತಕ್ಕೆ ವಿಕೆಟ್:ವಿರಾಟ್ ಕೊಹ್ಲಿ ಹೆಸರಲ್ಲಿ ಅಪರೂಪದ ದಾಖಲೆಯೊಂದಿದೆ. ಇದು ಈವರೆಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. 2011ರಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ಗೆ ಪ್ರವಾಸ ಬೆಳೆಸಿತ್ತು. ಉಭಯ ತಂಡಗಳ ನಡುವೆ ಟಿ20 ಪಂದ್ಯ ಆಯೋಜಿಸಲಾಗಿತ್ತು. ಆಗಸ್ಟ್ 31ರಂದು ನಡೆದ ಪಂದ್ಯದಲ್ಲಿ ಕೊಹ್ಲಿ 8ನೇ ಓವರ್ನಲ್ಲಿ ಬೌಲಿಂಗ್ ಮಾಡಿದ್ದರು. ಈ ವೇಳೆ ಮೊದಲ ಎಸೆತದಲ್ಲಿ ಕೆವಿನ್ ಪೀಟರ್ಸನ್ ವಿಕೆಟ್ ಪಡೆದಿದ್ದರು. ಆದರೆ ಈ ಎಸೆತ ವೈಡ್ ಆಗಿತ್ತು. ಕೊಹ್ಲಿ ಎಸೆದ ಚೆಂಡನ್ನು ಬೌಂಡರಿಗೆ ಕಳುಹಿಸಲೆಂದು ಕ್ರೀಸ್ನಿಂದ ಹೊರಬಂದ ಕೆವೀನ್ ಚೆಂಡು ಮಿಸ್ ಮಾಡಿದ್ದರು. ವಿಕೆಟ್ ಕೀಪರ್ ಧೋನಿ ತಕ್ಷಣವೇ ಸ್ಟಂಪ್ ಮಾಡಿದ್ದರು. ಇದು ವೈಡ್ ಬಾಲ್ ಆದ ಕಾರಣ ಕೊಹ್ಲಿ ಶೂನ್ಯ ಎಸೆತಕ್ಕೆ ವಿಕೆಟ್ ಪಡೆದಂತಾಯಿತು.
ಆರ್ಸಿಬಿಯಿಂದ ಬರ್ತ್‌ಡೇ ಶುಭಾಶಯ:ಕೊಹ್ಲಿ ಹುಟ್ಟುಹಬ್ಬಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಕೋರಿದೆ. ಎಕ್ಸ್ನಲ್ಲಿ ಕೊಹ್ಲಿ ಫೋಟೋ ಮತ್ತು ವಿಡಿಯೋ ಹಂಚಿಕೊಂಡು ವಿಶೇಷ ರೀತಿಯಲ್ಲಿ ಶುಭ ಕೋರಿದೆ. ಯುವರಾಜ್ ಸಿಂಗ್, ಜಸ್ಪ್ರೀತ್ ಬುಮ್ರಾ ಕೂಡ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ:ಶೂನ್ಯ ಎಸೆತಕ್ಕೆ ವಿಕೆಟ್ ಪಡೆದ ವಿಶ್ವದ ಏಕೈಕ ಕ್ರಿಕೆಟಿಗ ಯಾರು? ಇವರೀಗ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್!