ಬೆಂಗಳೂರು/ನವದೆಹಲಿ: ತಂಬಾಕು ಬೆಳೆಯನ್ನು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ವ್ಯಾಪ್ತಿಗೆ ತರಬೇಕು ಹಾಗೂ ಬೆಂಬಲ ಬೆಲೆ ನೀಡಬೇಕು. ಈ ಸಂಬಂಧ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ನಮ್ಮ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಅವರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೆಲೆ ಕುಸಿತ ಸೇರಿ ಹಲವಾರು ಸಮಸ್ಯೆಗಳಿಗೆ ಸಿಲುಕಿ ತೀವ್ರ ಸಂಕಷ್ಟದಲ್ಲಿರುವ ರಾಜ್ಯದ ತಂಬಾಕು ಬೆಳೆಗಾರರ ಹಿತದೃಷ್ಟಿಯಿಂದ ನಾವು ಸಚಿವರಿಗೆ ಈ ಮನವಿ ಸಲ್ಲಿಸಿದ್ದೇವೆ. ಇದೇ ವೇಳೆ ನಮ್ಮ ಜತೆಯಲ್ಲಿದ್ದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕೂಡ ಸಚಿವ ಗೋಯಲ್ ಅವರಿಗೆ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು ಎಂದು ತಿಳಿಸಿದ್ದಾರೆ.
ನೆರೆ ರಾಜ್ಯಗಳಲ್ಲಿ ತಂಬಾಕು ಬೆಳೆಗಾರಿಗೆ ಉತ್ತಮ ದರ ಸಿಗುತ್ತಿದೆ. ಕರ್ನಾಟಕದ ಬೆಳೆಗಾರರಿಗೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಾವು ಗಮನ ಹರಿಸಿ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುವಂತೆ ಮಾಡಬೇಕು. ಆಂಧ್ರಪ್ರದೇಶದಲ್ಲಿ ತಂಬಾಕಿನ ಬೆಲೆ ಪ್ರತಿ ಕೆಜಿಗೆ ಸರಾಸರಿ 320 ರೂ. ಇದೆ. ಕರ್ನಾಟಕದಲ್ಲಿ ಪ್ರತಿ ಕೆಜಿಗೆ 265 ರೂ. ಇದೆ. ಕಡಿಮೆ ಬೆಳೆಯಿಂದಗಾಗಿ ಬಡ ಹಾಗೂ ಮಧ್ಯಮ ಗಾತ್ರದ ಬೆಳೆಗಾರರಿಗೆ ಬಹಳ ನಷ್ಟವಾಗುತ್ತಿದೆ ಎಂಬ ಅಂಶವನ್ನು ಗೋಯಲ್ ಅವರ ಗಮನಕ್ಕೆ ತರಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತಂಬಾಕು ಬೆಳೆಯನ್ನು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ವ್ಯಾಪ್ತಿಗೆ ತಂದರೆ ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ಗಾತ್ರದ ಬೆಳೆಗಾರರಿಗೆ ಸಹಾಯ ಆಗುತ್ತದೆ ಹಾಗೂ ತಂಬಾಕು ಬೆಳೆಗೂ ಬೆಂಬಲ ಬೆಲೆ ನೀಡಿದರೆ ಬಡ ಕುಟುಂಬಗಳಿಗೆ ಆರ್ಥಿಕವಾಗಿ ಶಕ್ತಿ ತುಂಬಿದಂತೆ ಆಗುತ್ತದೆ. ಐಟಿಸಿಯಂತಹ ಬೃಹತ್ ಕಂಪನಿಗಳು ಇಂತಹ ಬೆಳೆಗಾರರಿಂದ ನೇರವಾಗಿ ತಂಬಾಕು ಖರೀದಿಸುವಂತೆ ಸೂಚನೆ ಕೊಡಬೇಕು ಎಂದು ಪಿಯೂಷ್ ಗೋಯಲ್ ಅವರಲ್ಲಿ ಮನವಿ ಮಾಡಲಾಗಿದೆ ಎಂದಿದ್ದಾರೆ.
ಈ ಬಗ್ಗೆ ಅತ್ಯಂತ ಸಕಾರಾತ್ಮಕವಾಗಿ ಸಚಿವರು ಸ್ಪಂದಿಸಿ, ಅಧಿಕಾರಿಗಳಿಗೆ ಕೆಲ ಆದೇಶಗಳನ್ನು ನೀಡಿದ್ದಾರೆ. ಮತ್ತೊಮ್ಮೆ ಅಧಿಕಾರಿಗಳನ್ನು ಭೇಟಿ ಮಾಡಿ ತಂಬಾಕು ಬೆಳೆಗಾರರ ಸಮಸ್ಯೆಗಳ ಬಗ್ಗೆ ಆಮೂಲಾಗ್ರವಾಗಿ ಚರ್ಚೆ ಮಾಡುವಂತೆ ಹೇಳಿದರು. ಅದರಂತೆ ನಾವು ಅವರ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಕೊಡಲಿದ್ದೇವೆ ಎಂದು ಹೇಳಿದ್ದಾರೆ.
ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಚಿವ ಸಾ.ರಾ.ಮಹೇಶ್, ಹುಣಸೂರು ಶಾಸಕ ಜಿ.ಟಿ.ಹರೀಶ್ ಗೌಡ, ಕೋಲಾರ ಸಂಸದ ಮಲ್ಲೇಶ್ ಬಾಬು ಹಾಗು ತಂಬಾಕು ಬೆಳೆಗಾರರು ನಿಯೋಗದಲ್ಲಿ ಇದ್ದರು. ಇದಕ್ಕೂ ಮುನ್ನ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದ ನಿಯೋಗ, ಇದೇ ವಿಷಯಕ್ಕೆ ಸಂಬಂಧಿಸಿ ಮನವಿ ಸಲ್ಲಿಸಿತು.
ಇದನ್ನೂ ಓದಿ: 7 ವರ್ಷಗಳಲ್ಲಿ 19 ಸಾವಿರ ಎಕರೆ ಅಕ್ರಮ ಅಫೀಮು ಬೆಳೆ ನಾಶ: ಮಣಿಪುರ ಸರ್ಕಾರದ ವರದಿ