ಇಂಡಿಯನ್ ಪ್ರೀಮಿಯರ್ ಲೀಗ್-2025ಕ್ಕಾಗಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಇತ್ತೀಚೆಗೆ ಆಟಗಾರರ ಮೆಗಾ ಹರಾಜು ನಡೆದಿತ್ತು. ಎಲ್ಲಾ ಹತ್ತು ತಂಡಗಳು 639 ಕೋಟಿ ರೂ.ಗೂ ಹೆಚ್ಚು ಹಣ ಖರ್ಚು ಮಾಡಿ 182 ಆಟಗಾರರನ್ನು ಖರೀದಿಸಿದ್ದವು. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಯುವ ಮತ್ತು ಹಿರಿಯ ಆಟಗಾರರನ್ನೊಳಗೊಂಡ ಹೊಸ ತಂಡ ಕಟ್ಟಿದೆ. ಕಳೆದ 17 ಸೀಸನ್ಗಳಲ್ಲಿ ಒಮ್ಮೆಯೂ ಕಪ್ ಗೆಲ್ಲದ ತಂಡ ಈ ಸಲ ಹೇಗಾದರೂ ಮಾಡಿ ಕಪ್ ಎತ್ತಿ ಹಿಡಿಯಬೇಕೆಂಬ ಪಣತೊಟ್ಟು ಅಳೆದೂ ತೂಗಿ ತಂಡ ರಚಿಸಿದೆ.
ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಮೊಹಮ್ಮದ್ ಸಿರಾಜ್, ವಿಲ್ ಜಾಕ್ಸ್ಅವರಂತಹ ಆಟಗಾರರನ್ನು ತಂಡದಿಂದ ಕೈಬಿಟ್ಟು ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಯಶ್ ದಯಾಳ್ ಅವರನ್ನು ಮಾತ್ರ ಉಳಿಸಿಕೊಂಡು ಹರಾಜಿಗೆ ಪ್ರವೇಶಿಸಿತ್ತು. ಇದರ ಫಲವಾಗಿ ಸಮತೋಲಿತ ತಂಡ ರಚಿಸಿ ಬ್ಯಾಟಿಂಗ್, ಬೌಲಿಂಗ್, ಆಲ್ರೌಂಡರ್ ಸೇರಿ ಎಲ್ಲಾ ವಿಭಾಗಗಳನ್ನು ಬಲಿಷ್ಟಪಡಿಸಿದೆ.
ಅದರಲ್ಲೂ ಬೌಲಿಂಗ್ ಪಡೆಯ ಬಗ್ಗೆ ಹೆಚ್ಚು ಗಮನ ಹರಿಸಿರುವ ಫ್ರಾಂಚೈಸಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್, ಲುಂಗಿ ಎನ್ಗಿಡಿ ಅವರಂತಹ ವೇಗದ ಬೌಲರ್ಗಳನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅದರಲ್ಲೂ, ಆರ್ಸಿಬಿಯ ಹಳೆಯ ಆಟಗಾರನಾಗಿದ್ದ ಹ್ಯಾಜಲ್‌ವುಡ್ 2022 ಮತ್ತು 23 ಎರಡು ಸೀಸನ್ಗಳಲ್ಲಿ ಆರ್ಸಿಬಿ ಪ್ರತಿನಿಧಿಸಿದ್ದರು. 2024ರ ವೇಳೆಗೆ ಗಾಯಕ್ಕೆ ತುತ್ತಾಗಿ ಐಪಿಎಲ್‌ನಿಂದ ಹೊರಗುಳಿದಿದ್ದರು. ಈ ಬಾರಿ ಮತ್ತೊಮ್ಮೆ ಅವರ ಮೇಲೆ ಭರವಸೆ ಇಟ್ಟು ತಂಡಕ್ಕೆ ಸೇರಿಸಿಕೊಂಡಿದೆ.
ಹರಾಜಿನಲ್ಲಿ ಅವರನ್ನು 12.50 ಕೋಟಿ ರೂ ಕೊಟ್ಟು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಈವರೆಗೂ ಒಟ್ಟು 27 ಐಪಿಎಲ್ ಪಂದ್ಯಗಳನ್ನು ಆಡಿರುವ ಜೋಶ್ ಹ್ಯಾಜಲ್‌ವುಡ್, 23.14 ಸರಾಸರಿಯಲ್ಲಿ 8.05 ಎಕಾನಮಿಯೊಂದಿಗೆ ಒಟ್ಟು 35 ವಿಕೆಟ್‌ಗಳನ್ನು ಪಡೆದಿದ್ದಾರೆ. 25ಕ್ಕೆ 4 ವಿಕೆಟ್ ಅವರ ಅತ್ಯುತ್ತಮ ಇನ್ನಿಂಗ್ಸ್. ಆದ್ರೆ RCB ಪ್ರತಿನಿಧಿಸುವಾಗ ಹೆಚ್ಚು ವಿಕೆಟ್ ಪಡೆದಿದ್ದಾರೆ. RCB ಪರ 15 ಪಂದ್ಯಗಳನ್ನು ಆಡಿರುವ ಇವರು 23 ವಿಕೆಟ್‌ಗಳನ್ನು ಪಡೆದಿದ್ದಾರೆ.
ಆದರೆ, ಕುತೂಹಲಕಾರಿ ವಿಷಯವೆಂದರೆ ಆರ್ಸಿಬಿ ಪರ 15 ಪಂದ್ಯಗಳನ್ನು ಆಡಿರುವ ಜೋಶ್ ಹ್ಯಾಜಲ್‌ವುಡ್ ಈವರೆಗೂ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಒಂದೇ ಒಂದು IPL ಪಂದ್ಯವನ್ನಾಗಲಿ ಅಥವಾ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಗಲಿ ಆಡಿಲ್ಲ. ಈ ಹಿನ್ನೆಲೆಯಲ್ಲಿ ಐಪಿಎಲ್ 2025ರಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಹೇಗೆ ಪ್ರದರ್ಶನ ತೋರುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಇದನ್ನೂ ಓದಿ: ರೆಫರಿ ಕೊಟ್ಟ ತೀರ್ಪಿಗೆ ಹಾರಿಹೋಯ್ತು 100 ಜನರ ಪ್ರಾಣ: ಫುಟ್ಬಾಲ್ ಮೈದಾನವಾಯ್ತು ರಣಾಂಗಣ; ಬೆಚ್ಚಿಬೀಳಿಸುವ ವಿಡಿಯೋ ವೈರಲ್!