ಹಾವೇರಿ: ಮಾನಸಿಕ ನೆಮ್ಮದಿ ಪಡೆಯುವ ಮನೋವೈಜ್ಞಾನಿಕ ದಾರಿಯನ್ನು ಜಾನಪದ ತೋರಿಸುತ್ತದೆ ಎಂದು ಆಂಧ್ರ ಪ್ರದೇಶದ ಬುಡಕಟ್ಟು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಟಿ.ವಿ.ಕಟ್ಟಿಮನಿ ಅಭಿಪ್ರಾಯಪಟ್ಟರು.
ಶಿಗ್ಗಾಂವಿ ತಾಲೂಕು ಗೋಟಗೊಡಿಯಲ್ಲಿರುವ ಜಾನಪದ ವಿವಿಯ 8 ಮತ್ತು 9ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಜಾನಪದ ಸಾಮಾಜಿಕ ಜ್ಞಾನ ಹೊಂದಿರುವ ವಿಜ್ಞಾನ. ವ್ಯಕ್ತಿಗಿಂತ ಸಮೂಹಕ್ಕೆ ಬೆಲೆ ಕೊಡುವ ಪರಂಪರೆಯನ್ನು ಜಾನಪದ ಕಲಿಸುತ್ತದೆ. 1954ರಲ್ಲಿ ಗದ್ದಿಗೆಮಠ ಕನ್ನಡ ಜಾನಪದ ಗೀತೆಗಳ ಮೇಲೆ ಪಿಹೆಚ್‌ಡಿ ಮಾಡುವ ಮೂಲಕ ಹೊಸ ಜಾನಪದದ ಮಹತ್ವ ಸಾರಿದರು ಎಂದು ಕಟ್ಟಿಮನಿ ಹೇಳಿದ್ದಾರೆ.
ಜಾನಪದ ವಿವಿ ಘಟಿಕೋತ್ಸದಲ್ಲಿ ಪಾಲ್ಗೊಂಡಿರುವುದಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಟಿ.ಎಂ.ಸುಧಾಕರ್ ಸಂತಸ ವ್ಯಕ್ತಪಡಿಸಿದರು.
ವಿವಿಯ ಅಭಿವೃದ್ದಿಗೆ ಸರ್ಕಾರದಿಂದ ಸಿಗಬೇಕಾದ ಅನುಧಾನ ಬಿಡುಗಡೆ ಮಾಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವರು ತಿಳಿಸಿದರು. ಘಟಿಕೋತ್ಸವದಲ್ಲಿ ಆರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
2021-22ನೇ ಸಾಲಿನಲ್ಲಿ ಜಾನಪದ ವೈದ್ಯ ಡಾ.ಹನುಮಂತಪ್ಪ ಗೋವಿಂದಪ್ಪ ದಡ್ಡಿ, ಜನಪದ ಸಾಹಿತಿ ಡಾ.ಶಾಂತಿನಾಯಕ, ರಾಮನಗರದ ಹಾಸನ ರಘು ಹಾಗೂ 2022-23ನೇ ಸಾಲಿನಲ್ಲಿ ಬೆಂಗಳೂರಿನ ಡಾ. ಜ್ಯೋತಿರ್ಲಿಂಗ ಚಂದ್ರಾಮ ಹೊನಕಟ್ಟಿ, ಪುರಾಣ ಕಾವ್ಯ ಭಾರತೀಯ ಪರಂಪರೆಯ ವಿಮರ್ಶಕ ಡಾ. ಎಸ್. ಸಿ ಶರ್ಮಾ, ಯಾದಗಿರಿಯ ಜನಪದ ವಿದ್ವಾಂಸ ಸಿದ್ರಾಮ ಹೊನ್ನಕಲ್ ಅವರಿಗೆ ಈ ಸಾಲಿನ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಲಾಯಿತು.
2021-22ನೇ ಸಾಲಿನ 8ನೇ ಘಟಿಕೋತ್ಸವದಲ್ಲಿ 1 ಪಿಹೆಚ್‌ಡಿ, 3 ಚಿನ್ನದ ಪದಕ, 13 ಪ್ರಥಮ ರ‍್ಯಾಂಕ್ ಸೇರಿದಂತೆ ಒಟ್ಟು 216 ವಿದ್ಯಾರ್ಥಿಗಳಿಗೆ ಮತ್ತು 2022-23ನೇ ಸಾಲಿನ 9ನೇ ಘಟಿಕೋತ್ಸವದಲ್ಲಿ 3 ಪಿಹೆಚ್‌ಡಿ, 11 ಚಿನ್ನದ ಪದಕ, 14 ಪ್ರಥಮ ರ‍್ಯಾಂಕ್ ಸೇರಿದಂತೆ ಒಟ್ಟು 327 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.