Virat Kohli Fans Century Celebration:ನಿನ್ನೆ (ಭಾನುವಾರ) ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದು ಗೊತ್ತೇ ಇದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಇನ್ನಿಂಗ್ಸ್ ಮೂಲಕ ಕೋಟ್ಯಂತರ ಕ್ರಿಕೆಟ್‌ಪ್ರಿಯರ ಮನಗೆದ್ದಿದ್ದಾರೆ.
ರೋಹಿತ್ ಶರ್ಮಾ ನಿರ್ಗಮನದ ಬಳಿಕ ಕ್ರೀಸ್ಗೆ ಆಗಮಿಸಿದ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ, ಪಾಕಿಸ್ತಾನ ಬೌಲರ್ಗಳನ್ನು ಬೆಂಡೆತ್ತಿದರು. ಪಂದ್ಯದ ಕೊನೆಗೆ ಬೌಂಡರಿ ಬಾರಿಸಿ ಪಂದ್ಯ ಮುಗಿಸಿ ಶತಕವನ್ನೂ ಪೂರ್ಣಗೊಳಿಸಿದರು.
ಪಾಕಿಸ್ತಾನದಲ್ಲಿ ಫ್ಯಾನ್ಸ್ ಸಂಭ್ರಮ:ಕೊಹ್ಲಿ ಶತಕ ಬಾರಿಸುತ್ತಿದ್ದಂತೆ ಭಾರತ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಹೈವೋಲ್ಟೇಜ್ ಪಂದ್ಯವನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸುತ್ತಿದ್ದ ಫ್ಯಾನ್ಸ್, ಕೊಹ್ಲಿ ಶತಕ ಪೂರ್ಣಗೊಳ್ಳುತ್ತಿದ್ದಂತೆ ಖುಷಿಯಲ್ಲಿ ಕೇಕೆ ಹಾಕಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಕೊಹ್ಲಿ 116 ಎಸೆತಗಳಲ್ಲಿ 100 ರನ್ ಪೇರಿಸಿದರು. ಇದು ಏಕದಿನ ಕ್ರಿಕೆಟ್ನಲ್ಲಿ ಅವರ 52ನೇ ಶತಕವಾಗಿದ್ದು ಒಟ್ಟಾರೆ 82ನೇ ಅಂತಾರಾಷ್ಟ್ರೀಯ ಶತಕವಾಗಿದೆ. ಅತೀ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್‌ಗಿಂತ ಮುಂದಿರುವ ಏಕೈಕ ಆಟಗಾರರೆಂದರೆ ಸಚಿನ್ ತೆಂಡೂಲ್ಕರ್ (100 ಶತಕಗಳು).