India vs Pakistan Cricket Match Viewership Record: ಚಾಂಪಿಯನ್ಸ್ ಟ್ರೋಫಿ-2025ರ ಭಾಗವಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಮಧ್ಯೆ ಭಾನುವಾರ ನಡೆದ ಪಂದ್ಯ ಕ್ರಿಕೆಟ್ ಇತಿಹಾಸದಲ್ಲೇ ಅತಿಹೆಚ್ಚು ವೀಕ್ಷಣೆ ಪಡೆದ ಪಂದ್ಯವೆಂಬ ಇತಿಹಾಸ ಸೃಷ್ಟಿಸಿತು.
ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕ್, ಸಾಮಾನ್ಯ ಮೊತ್ತ ಕಲೆ ಹಾಕಿತು. ಸೌದ್ ಶಕೀಲ್ (62 ರನ್) ಹೈಸ್ಕೋರರ್ ಎನಿಸಿದರು. ಉಳಿದಂತೆ, ಮೊಹಮ್ಮದ್ ರಿಜ್ವಾನ್ (46), ಕುಶ್ದೀಲ್ (38) ತಂಡದ ಸ್ಕೋರ್ಗೆ ಕೊಡುಗೆ ನೀಡಿದರು. ಇವರ ಬ್ಯಾಟಿಂಗ್ ನೆರವಿನಿಂದ ಪಾಕ್ 241 ರನ್ ಕಲೆಹಾಕಿತು.
ಸಾಮಾನ್ಯ ಟಾರ್ಗೆಟ್ ಪಡೆದ ಭಾರತ 6 ವಿಕೆಟ್ ಬಾಕಿ ಇರುವಂತೆಯೇ ಸುಲಭವಾಗಿ ಗೆಲುವು ಸಾಧಿಸಿತು. ವಿರಾಟ್ ಕೊಹ್ಲಿ ಶತಕ ಸಿಡಿಸಿದರು. ಉಳಿದಂತೆ, ಶುಭಮನ್ ಗಿಲ್ 46 ರನ್ ಕಲೆ ಹಾಕಿದರೆ, ಶ್ರೇಯಷ್ ಅಯ್ಯರ್ (56) ಆಕರ್ಷಕ ಬ್ಯಾಟಿಂಗ್ ಮೂಲಕ ಅರ್ಧಶತಕ ಪೇರಿಸಿದರು.
ದಾಖಲೆ!: ಈ ಪಂದ್ಯವನ್ನು ಜಿಯೋಸ್ಟಾರ್‌ನಲ್ಲಿ ಲೈವ್ಸ್ಟ್ರೀಮ್ ಮಾಡಲಾಗಿದ್ದು, ಒಟ್ಟು 60.2 ಕೋಟಿ ವೀಕ್ಷಣೆ ಪಡೆದುಕೊಂಡಿದೆ. ಆನ್‌ಲೈನ್ ಲೈವ್ ಸ್ಟ್ರೀಮಿಂಗ್‌ನಲ್ಲಿ ಕ್ರಿಕೆಟ್ ಪಂದ್ಯವೊಂದು ಈ ಮಟ್ಟಿಗೆ ವೀಕ್ಷಣೆ ಪಡೆದಿರುವುದು ಇದೇ ಮೊದಲು!.
ವಿರಾಟ್ ಇನ್ನಿಂಗ್ಸ್ ಇಂಪ್ಯಾಕ್ಟ್: ಪಂದ್ಯದ ಆರಂಭದಲ್ಲಿ ಮೊಹಮ್ಮದ್ ಶಮಿ ಮೊದಲ ಓವರ್ ಮಾಡುವಾಗ ವ್ಯೂವರ್‌ಶಿಪ್ ಸಂಖ್ಯೆ 6.8 ಕೋಟಿ ಇತ್ತು. ಪಾಕಿಸ್ತಾನದ ಇನ್ನಿಂಗ್ಸ್ ಮುಕ್ತಾಯದ ವೇಳೆಗೆ 32.2 ಕೋಟಿಗೆ ತಲುಪಿದೆ. ಭಾರತ ಇನ್ನಿಂಗ್ಸ್ ಆರಂಭವಾದ ಬಳಿಕ 36.2 ಕೋಟಿಗೆ ತಲುಪಿತ್ತು. ಆದರೆ ವಿರಾಟ್ ಕೊಹ್ಲಿ ಶತಕ ಸಮೀಪಿಸುತ್ತಿದ್ದಂತೆ ಏಕಾಏಕಿ ವೀಕ್ಷಣೆಗಾರರ ಸಂಖ್ಯೆ 60.2 ಕೋಟಿ ತಲುಪಿದೆ. ಒಂದು ರೀತಿಯಲ್ಲಿ ವೀಕ್ಷಣೆ ಸಂಖ್ಯೆ ಹೆಚ್ಚಾಗಲು ವಿರಾಟ್ ಇನ್ನಿಂಗ್ಸ್ ಕೂಡ ಪ್ರಮುಖ ಕಾರಣವಾಗಿದೆ.
ಹಾಟ್‌ಸ್ಟಾರ್-ಜಿಯೋ ವಿಲೀನ: ಇತ್ತೀಚಿಗೆ ಜಿಯೋಸಿನಿಮಾ ಮತ್ತು ಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕ್ರಿಕೆಟ್ ಪಂದ್ಯಗಳ ಲೈವ್ಸ್ಟ್ರೀಮ್ ಮಾಡುತ್ತಿದ್ದವು. ಆದರೆ, ಇದರಿಂದ ಎರಡೂ ಪ್ಲಾಟ್ಫಾರ್ಮ್ಗಳಿಗೆ ನಷ್ಟವಾಗುವ ಅಪಾಯವಿದೆ ಎಂದರಿತು, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಎರಡೂ ವಿಲೀನಗೊಂಡು ಇದೀಗ 'ಜಿಯೋಸ್ಟಾರ್' ಆಗಿದೆ.
ಕಳೆದ ವರ್ಷ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ ಪಂದ್ಯ ಹಾಟ್‌ಸ್ಟಾರ್‌ನಲ್ಲಿ ಲೈವ್ಸ್ಟ್ರೀಮಿಂಗ್ ಮಾಡಲಾಗಿತ್ತು. ಆಗ 4 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿತ್ತು. ಇದು ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಗರಿಷ್ಠ ವೀಕ್ಷಣೆ ಪಡೆದ ಪಂದ್ಯವಾಗಿ ದಾಖಲೆ ಬರೆದಿತ್ತು.
ಇದನ್ನೂ ಓದಿ: ವಿರಾಟ್ ಕೊಹ್ಲಿ ಅಬ್ಬರಕ್ಕೆ ಒಂದೇ ಪಂದ್ಯದಲ್ಲಿ ಎರಡು ದಾಖಲೆ ಸೃಷ್ಟಿ!