Virat Kohli Records In Australia: ಶುಕ್ರವಾರ (ನಾಳೆ)ದಿಂದ ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಆರಂಭವಾಗಲಿದೆ. 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಪರ್ತ್ ಮೈದಾನದಲ್ಲಿ ನಡೆಯಲಿದೆ. ಇತ್ತೀಚೆಗೆ ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿ ಸರಣಿ ಕೈಚೆಲ್ಲಿದ್ದ ಟೀಂ ಇಂಡಿಯಾಗೆ ಈ ಸರಣಿ ಮಹತ್ವದ್ದಾಗಿದೆ. ಆಸ್ಟ್ರೇಲಿಯಾವನ್ನು 4 ಪಂದ್ಯಗಳಲ್ಲಿ ಮಣಿಸಿದರೆ ಮಾತ್ರ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ನೇರವಾಗಿ ಪ್ರವೇಶ ಪಡೆಯಲಿದೆ.
ಬಲಿಷ್ಠ ತಂಡದೊಂದಿಗೆ ಆಸ್ಟ್ರೇಲಿಯಾಗೆ ತೆರಳಿರುವ ಭಾರತದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಅದರಲ್ಲೂ ಅಗ್ರ ಬ್ಯಾಟರ್ ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಕಮ್ಬ್ಯಾಕ್ ಮಾಡುವ ನಿರೀಕ್ಷೆ ಅಭಿಮಾನಿಗಳದ್ದು. ಕಾಂಗರೂ ನಾಡಲ್ಲಿ ನಡೆದ ಟೆಸ್ಟ್ಗಳಲ್ಲಿ ಕೊಹ್ಲಿ ಕೆಲವು ಬೆಸ್ಟ್ ಇನ್ನಿಂಗ್ಸ್ ಆಡಿದ್ದಾರೆ. ಕೊಹ್ಲಿ ಆಸೀಸ್ ನೆಲದಲ್ಲಿ ಎಷ್ಟು ಶತಕ ಸಿಡಿಸಿದ್ದಾರೆ, ಅವರ ಬೆಸ್ಟ್ ಇನ್ನಿಂಗ್ಸ್ ಯಾವುದು ನೋಡೋಣ.
ಅಡಿಲೇಡ್ ಟೆಸ್ಟ್, 2012:ಆಸ್ಟ್ರೇಲಿಯಾ ವಿರುದ್ಧ 2011-12ರಲ್ಲಿ ಅಡಿಲೇಡ್ ಮೈದಾನದಲ್ಲಿ ನಡೆದಿದ್ದ 4ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಚೊಚ್ಚಲ ಶತಕ ಸಿಡಿಸಿದ್ದರು. ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 604 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಇದಕ್ಕುತ್ತರವಾಗಿ ಭಾರತ 272 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿ ಘರ್ಜಿಸಿದ್ದರು. ತಮ್ಮ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 116 ರನ್ ಕಲೆಹಾಕಿದ್ದರು. ಆದ್ರೆ ಈ ಪಂದ್ಯವನ್ನು ಭಾರತ 298 ರನ್‌ಗಳಿಂದ ಸೋತಿತ್ತು.
ಅಡಿಲೆಡ್ ಟೆಸ್ಟ್, 2014:2014ರಲ್ಲಿ ಅಡಿಲೇಡ್‌ನಲ್ಲಿ ನಡೆದಿದ್ದ ರೋಚಕ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು. ಇದು ಅವರ ಬೆಸ್ಟ್ ನಾಕ್‌ಗಳಲ್ಲಿ ಒಂದಾಗಿತ್ತು. ಟೆಸ್ಟ್ನ ಕೊನೆಯ ದಿನದಲ್ಲಿ 364 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತಕ್ಕೆ ಕೊಹ್ಲಿ ಆಸರೆಯಾಗಿದ್ದರು. 16 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 141 ರನ್ ಗಳಿಸಿದ್ದರು. ಆದರೆ ಈ ಪಂದ್ಯವನ್ನು ಭಾರತ 48 ರನ್‌ಗಳಿಂದ ಸೋತಿತ್ತು.