ಮುಂಬೈ(ಮಹಾರಾಷ್ಟ್ರ):ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ವಹಿಸಿಕೊಂಡಿದ್ದಾರೆ. ಆದರೆ, ಆರಂಭದ ಮೂರು ಪಂದ್ಯಗಳನ್ನು ತಂಡ ಸೋತಿರುವುದಕ್ಕೆ ಹಾರ್ದಿಕ್ ಬಗ್ಗೆ ಟೀಕೆ-ಟಿಪ್ಪಣಿಗಳು ವ್ಯಕ್ತವಾಗುತ್ತಿವೆ. ಮುಂಬೈ ಅಭಿಮಾನಿಗಳು ಅವರನ್ನು ಟ್ರೋಲ್ ಮಾಡುವುದು ಮತ್ತು ಕಿಚಾಯಿಸುವುದು ಸಾಮಾನ್ಯವಾಗುತ್ತಿದೆ. ಇಂತಹದ್ದೇ ಸನ್ನಿವೇಶ ಗುರುವಾರ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಿತು. ಆದರೆ, ಈ ವೇಳೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ, ಪಾಂಡ್ಯ ಅವರನ್ನು ಗೇಲಿ ಮಾಡುತ್ತಿದ್ದ ಜನರಿಗೆ ತಿಳಿ ಹೇಳಿದ ಪ್ರಸಂಗ ನಡೆಯಿತು.
ಮಾರ್ಚ್ 11ರಂದು ಐಪಿಎಲ್ನ 25ನೇ ಪಂದ್ಯದಲ್ಲಿ ಮುಂಬೈ ಮತ್ತು ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಗ್ಯಾಲರಿಯಿಂದ ಅಭಿಮಾನಿಗಳು ಪಾಂಡ್ಯ ಬಗ್ಗೆ ಲೇವಡಿ ಮಾಡುತ್ತಿದ್ದರು. ಈ ವೇಳೆ, ಫೀಲ್ಡಿಂಗ್ನಲ್ಲಿದ್ದ ವಿರಾಟ್ ಕೊಹ್ಲಿ ಫಾನ್ಸ್ಗೆ ಆ ರೀತಿ ವರ್ತಿಸದಂತೆ ಸನ್ನೆ ಮಾಡಿದರು. ಇದರ ಬದಲು ಪಾಂಡ್ಯರನ್ನು ಬೆಂಬಲಿಸುವಂತೆ ಸೂಚಿಸಿದರು. ಇದರ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತಕ್ಷಣವೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿವೆ. ಕೊಹ್ಲಿ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಆರ್ಸಿಬಿ ವಿರುದ್ಧ ಟಾಸ್ ಗೆದ್ದ ಮುಂಬೈ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ನಂತರದ ಇನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಬಂದ ಪಾಂಡ್ಯ ಕುರಿತು ಅಭಿಮಾನಿಗಳು ಅಪಹಾಸ್ಯ ಮಾಡುತ್ತಿದ್ದರು. ಹಿರಿಯ ಆಟಗಾರ ರೋಹಿತ್ ಶರ್ಮಾ ಔಟಾದ ನಂತರ ಪಾಂಡ್ಯ ಕ್ರೀಸ್ಗೆ ಬರುತ್ತಿದ್ದಂತೆ ಕೂಗಾಡಲು ಶುರು ಮಾಡಿದ್ದರು. ಕೂಡಲೇ ಕೊಹ್ಲಿ, 'ಹಾರ್ದಿಕ್ ಭಾರತೀಯ ಕ್ರಿಕೆಟ್ ತಂಡದ ಸದಸ್ಯ' ಎಂದು ಅಭಿಮಾನಿಗಳಿಗೆ ನೆನಪಿಸಿ, ಅವರ ಬೆಂಬಲಕ್ಕೆ ನಿಲ್ಲುವಂತೆ ಸನ್ನೆ ಮಾಡಿದ್ದು, ವಿಡಿಯೋದಲ್ಲಿ ಕಾಣಬಹುದಾಗಿದೆ.