ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅನರ್ಹತೆಗೊಂಡ ಬೆನ್ನಲ್ಲೇ ಕುಸ್ತಿಗೆ ರಾಜೀನಾಮೆ ಘೋಷಿಸಿದ್ದ ವಿನೇಶ್ ಫೋಗಟ್ ರಾಜಕೀಯ ಪ್ರವೇಶ ಮಾಡಿ, ಇದೀಗ ಚುನಾವಣೆ ಅಖಾಡದಲ್ಲಿ ನಿಂತಿದ್ದಾರೆ. ಕಳೆದ ವಾರ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಅವರು, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಜುಲಾನ ಕ್ಷೇತ್ರದ ಕೈ ಅಭ್ಯರ್ಥಿಯಾಗಿದ್ದಾರೆ. ಈ ನಡುವೆ ಅಜಿತ್ ಅಂಜುಮ್ ಅವರ ಯೂಟ್ಯೂಬ್ ಚಾನಲ್ಗೆ ಮಾತನಾಡಿರುವ ಅವರು, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಪಿಟಿ ಉಷಾ ಕುರಿತಾಗಿ ಗಂಭೀರ ಆರೋಪ ಮಾಡಿದ್ದಾರೆ.
ಒಲಿಂಪಿಕ್ಸ್ನಲ್ಲಿ 50 ಕೆಜಿ ವಿಭಾಗದ ಕುಸ್ತಿಯಲ್ಲಿ ಅಂತಿಮ ಸುತ್ತಿನವರೆಗೆ ವಿನೇಶ್ ಪೋಗಟ್ ಸಾಗಿದ್ದರು. ಇನ್ನೇನು ಪದಕ ಖಚಿತ ಎನ್ನುವ ಹೊತ್ತಿನಲ್ಲಿ ಪರಿಸ್ಥಿತಿ ಬದಲಾಗಿತ್ತು. ಅಂತಿಮ ಸುತ್ತಿಗೆ ಮುನ್ನ ವಿನೇಶ್ ತೂಕ 100ಗ್ರಾಂ ಹೆಚ್ಚಳ ಕಂಡ ಹಿನ್ನೆಲೆ ಅವರು ಸ್ಪರ್ಧೆಯಿಂದ ಅನರ್ಹತೆಗೊಂಡರು. ರಾತ್ರೋ ರಾತ್ರಿ ಹೆಚ್ಚಾದ ಎರಡು ಕೆಜಿ ತೂಕ ಇಳಿಕೆಗೆ ಇನ್ನಿಲ್ಲದಂತೆ ಕಸರತ್ತು ಮಾಡಿದ್ದಾರೆ. ಇದರಿಂದ ನಿರ್ಜಲೀಕರಣಕ್ಕೆ ಒಳಗಾಗಿದ್ದು, ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಪಿಟಿ ಉಷಾ, ವಿನೇಶ್ ಅವರನ್ನು ಭೇಟಿಯಾಗಲು ಬಂದಿದ್ದರು.
ಪಿಟಿ ಉಷಾ ಮೇಲೆ ಗಂಭೀರ ಆರೋಪ: ಆಸ್ಪತ್ರೆಯಲ್ಲಿದ್ದಾಗ ಪಿಟಿ ಉಷಾ ಭೇಟಿಯಾದ ಕುರಿತು ಯೂಟ್ಯೂಬ್ನಲ್ಲಿ ಮಾತನಾಡಿರುವ ಅವರು, 50 ಕೆಜಿ ಕುಸ್ತಿ ಅಂತಿಮ ಸುತ್ತಿಗೆ ಮುನ್ನಾ ದಿನ ನಾನು ಆಸ್ಪತ್ರೆಗೆ ದಾಖಲಾದೆ. ಈ ವೇಳೆ ಪಿಟಿ ಉಷಾ ನನ್ನನ್ನು ಭೇಟಿಯಾಗಲು ಬಂದಿದ್ದರು. ಆದರೆ, ಅವರಿಂದ ನನಗೆ ಯಾವುದೇ ಸಹಾಯವಾಗಲಿಲ್ಲ. ಅವರು ರಾಜಕೀಯದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ನಾನು ಕುಸ್ತಿಯನ್ನು ಮುಂದುವರೆಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.