ಹೈದರಾಬಾದ್: ಟೆಸ್ಟ್ ಪಂದ್ಯಗಳು ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ನ ಕೌಶಲ್ಯ, ತಂತ್ರ ಮತ್ತು ತಾಳ್ಮೆ ಪರೀಕ್ಷಿಸುತ್ತವೆ. ಅದರಲ್ಲೂ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗೆ ಬ್ಯಾಟಿಂಗ್ ಮಾಡುವುದು ಯಾವಾಗಲೂ ಕಷ್ಟಕರವಾಗಿರುತ್ತದೆ. ಆಟದ ಪರಿಸ್ಥಿತಿಗಳು, ಪಿಚ್‌ನ ಸವೆತ ಮತ್ತು ಬೌಲ್ ತಿರುಗುವಿಕೆ ಹೆಚ್ಚಾಗಿರುವುದರಿಂದ ಬ್ಯಾಟ್ಸ್‌ಮನ್‌ಗಳಿಗೆ ತುಂಬಾ ಕಷ್ಟಕರವಾಗಿರುತ್ತದೆ. ಇಂತಹ ಕಠಿಣ ಪರಿಸ್ಥಿತಿಯಲ್ಲೇ ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಆಡಿರುವ ಸ್ಮರಣೀಯ ಇನ್ನಿಂಗ್ಸ್‌ಗಳು ಇಂದಿಗೂ ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಗಳ ನೆನಪಿನಲ್ಲಿ ಅಚ್ಚೊತ್ತಿವೆ. ಹಾಗಾದರೆ ಬನ್ನಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅತೀ ಹೆಚ್ಚು ರನ್ಗಳಿಸಿದ ಬ್ಯಾಟರ್ ಯಾರೆಂದು ಇದೀಗ ತಿಳಿದುಕೊಳ್ಳೋಣ.
1. ಸುನಿಲ್ ಗಾವಸ್ಕರ್: ಭಾರತ ಕ್ರಿಕೆಟ್ ಕಂಡ ಲೆಜೆಂಡರಿ ಆಟಗಾರರಲ್ಲಿ ಸುನಿಲ್ ಗಾವಸ್ಕರ್ ಕೂಡ ಒಬ್ಬರಾಗಿದ್ದಾರೆ. ಇವರು 1979ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆಸ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 221 ರನ್ಗಳನ್ನು ಚಚ್ಚಿದ್ದರು. ಇದು ಅವರ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ. ಈ ಇನ್ನಿಂಗ್ಸ್‌ನಲ್ಲಿ ಮೊದಲು ಚೇತನ್ ಚೌಹಾಣ್ (80) ಜೊತೆಗೂಡಿ ಮೊದಲ ವಿಕೆಟ್‌ಗೆ 213 ರನ್ ಸೇರಿಸಿದರು ಮತ್ತು ನಂತರ ಎರಡನೇ ವಿಕೆಟ್‌ಗೆ ದಿಲೀಪ್ ವೆಂಗ್‌ಸರ್ಕರ್ (52) ಜೊತೆ ಸೇರಿ 153 ರನ್ ಕಲೆಹಾಕಿದರು. ಅವರ ಈ 490 ನಿಮಿಷಗಳ ಇನ್ನಿಂಗ್ಸ್‌ನಲ್ಲಿ 21 ಬೌಂಡರಿಗಳು ಸೇರಿವೆ.
2. ಕೆಎಲ್ ರಾಹುಲ್:ಈ ಪಟ್ಟಿಯ ಎರಡನೇ ಸ್ಥಾನದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಇದ್ದಾರೆ. ಇವರು 2018ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 149ರನ್ ಗಳಿಸಿದ್ದರು. 464 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತದ ಪರ ಕೆಎಲ್ ರಾಹುಲ್, ರಿಷಭ್ ಪಂತ್ ಜೊತೆಗೂಡಿ ಉತ್ತಮ ಸ್ಕೋರ್ ಕಲೆಹಾಕಿದ್ದರು. ಆದರೆ, ಇಂಗ್ಲೆಂಡ್ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಕೆಎಲ್ ರಾಹುಲ್ ಅವರ ವಿಕೆಟ್ ಪಡೆದು ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅಂತಿಮವಾಗಿ ಈ ಪಂದ್ಯವನ್ನು ಭಾರತ 118 ರನ್‌ಗಳಿಂದ ಸೋಲನುಭವಿಸಿತು.
3. ದಿಲೀಪ್ ವೆಂಗ್‌ಸರ್ಕರ್:1979ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ದಿಲೀಪ್ ವೆಂಗ್‌ಸರ್ಕರ್ 146 ರನ್ ಗಳಿಸಿದ್ದರು. ಇದು ಅವರ ಅತ್ಯಂತ ಸ್ಮರಣೀಯ ಪ್ರದರ್ಶನವಾಗಿತ್ತು, ಅವರ ಈ ಇನ್ನಿಂಗ್ಸ್ನಿಂದ ಭಾರತ 390 ಗಡಿ ತಲುಪಿತ್ತು. ಡ್ರಾ ಸಾಧಿಸಲು ಭಾರತಕ್ಕೆ ಇನ್ನೂ 26 ರನ್ ಗಳ ಅಗತ್ಯವಿದ್ದ ಸಮಯದಲ್ಲಿ ದಿಲೀಪ್ ರನ್ ಔಟ್ಗೆ ಬಲಿಯಾದರು. ಇದರಿಂದ ಭಾರತ ಈ ಪಂದ್ಯವನ್ನು ಕೈಚೆಲ್ಲಿತು.
4. ವಿರಾಟ್ ಕೊಹ್ಲಿ:2014-15ರ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ 86.50 ಸರಾಸರಿಯಲ್ಲಿ 692 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದರು. ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ 115 ರನ್ ಗಳಿಸಿದ್ದರೇ. ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯದ ಮಾರಕ ಬೌಲರ್‌ಗಳಾದ ಮಿಚೆಲ್ ಜಾನ್ಸನ್, ಪೀಟರ್ ಸಿಡ್ಲ್, ನಾಥನ್ ಲಿಯಾನ್ ಅವರನ್ನು ಎದುರಿಸಿ 141 ರನ್ ಚಚ್ಚಿದ್ದರು. ಆದರೆ ಯಾವೊಬ್ಬ ಆಟಗಾರನಿಂದ ಸರಿಯಾದ ಬೆಂಬಲ ಸಿಗದ ಕಾರಣ ಭಾರತ 48 ರನ್‌ಗಳಿಂದ ಪರಾಭವಗೊಂಡಿತ್ತು.