ನ್ಯೂಯಾರ್ಕ್:ಟಿ20 ವಿಶ್ವಕಪ್ ಟೂರ್ನಿ ಹಿನ್ನೆಲೆಯಲ್ಲಿ ಯುಎಸ್ನಲ್ಲಿರುವ ಟೀಂ ಇಂಡಿಯಾ ಆಟಗಾರರು ಸಿದ್ಧತೆ ಆರಂಭಿಸಿದ್ದಾರೆ. ಚುಟುಕು ವಿಶ್ವಕಪ್ ಪಂದ್ಯಾವಳಿಯು ಜೂನ್ 2ರಿಂದ ಆರಂಭವಾಗಲಿದ್ದು, ವೆಸ್ಟ್ ಇಂಡೀಸ್ ಹಾಗೂ ಯುಎಸ್ಎ ಜಂಟಿ ಆತಿಥ್ಯ ವಹಿಸುತ್ತಿವೆ. ಮೆಗಾ ಟೂರ್ನಿಗೆ ಯುಎಸ್ಎ ಹಾಗೂ ಕೆನಡಾ ನಡುವಿನ ಪಂದ್ಯದೊಂದಿಗೆ ಚಾಲನೆ ಸಿಗಲಿದೆ.
ಇತ್ತೀಚೆಗೆ ಮುಕ್ತಾಯವಾದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಳಪೆ ನಾಯಕತ್ವದಿಂದ ನೆಟ್ಟಿಗರ ಟೀಕೆಗೆ ಗುರಿಯಾಗಿರುವ ಭಾರತದ ಉಪ ನಾಯಕ ಹಾರ್ದಿಕ್ ಪಾಂಡ್ಯ ಕೂಡ ತಂಡವನ್ನು ಸೇರಿಕೊಂಡಿದ್ದಾರೆ. ತರಬೇತಿ ಅವಧಿಯ ವೇಳೆ ತಂಡದೊಂದಿಗೆ ಭಾಗಿಯಾಗಿದ್ದಾರೆ.
ಮೊದಲ ಬ್ಯಾಚ್ನಲ್ಲಿ ನಾಯಕ ರೋಹಿತ್ ಶರ್ಮಾ, ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ, ಶಿವಂ ದುಬೆ, ಸೂರ್ಯಕುಮಾರ್ ಯಾದವ್, ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಸೇರಿದಂತೆ ಇತರರು ನ್ಯೂಯಾರ್ಕ್ ತಲುಪಿದ್ದಾರೆ. ಬಳಿಕ ಎರಡನೇ ಬ್ಯಾಚ್ ಕೂಡ ಅಮೆರಿಕದತ್ತ ತೆರಳಿದೆ. ಪ್ರಮುಖ ಪಂದ್ಯಾವಳಿ ಹಿನ್ನೆಲೆಯಲ್ಲಿ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.
ಕೆಲ ಆಟಗಾರರು ತರಬೇತಿ ನಡೆಸುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಬುಮ್ರಾ ಕೆಲ ಫೋಟೊಗಳನ್ನು ಶೇರ್ ಮಾಡಿದ್ದು, ಆಟಗಾರರು ಜಾಗಿಂಗ್ ಹಾಗೂ ತರಬೇತಿಯಲ್ಲಿ ಭಾಗವಹಿಸಿದ್ದಾರೆ. ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ ನ್ಯೂಯಾರ್ಕ್ನಲ್ಲಿ ಅಭ್ಯಾಸದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹಾರ್ದಿಕ್ ಸಹ 'ರಾಷ್ಟ್ರೀಯ ಕರ್ತವ್ಯದ ಮೇಲೆ' (On National Duty) ಎಂಬ ಕ್ಯಾಪ್ಶನ್ನೊಂದಿಗೆ ಫೋಟೋ ಪೋಸ್ಟ್ ಮಾಡಿದ್ದಾರೆ.
ಟೂರ್ನಿಯಲ್ಲಿ ರೋಹಿತ್ ಶರ್ಮಾ ಪಡೆಯು 'ಎ' ಗ್ರೂಪ್ ಹಂತದಲ್ಲಿ ಐರ್ಲೆಂಡ್, ಕೆನಡಾ, ಪಾಕಿಸ್ತಾನ ಹಾಗೂ ಯುಎಸ್ಎ ವಿರುದ್ಧ ಸೆಣಸಲಿದೆ. ತಂಡದ ಮೊದಲು ಪಂದ್ಯವು ಜೂನ್ 5ರಂದು ಐರ್ಲೆಂಡ್ ವಿರುದ್ಧ ಇದೆ. ಅದಕ್ಕೂ ಮುನ್ನ ಭಾರತವು ಜೂನ್ 1ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ.
ಕಳೆದ ಬಾರಿ (2022) ಆಸ್ಟ್ರೇಲಿಯಾದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಸೋಲಿನೊಂದಿಗೆ ಹೊರಬಿದ್ದಿತ್ತು. ಭಾರತವು 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ದಾಖಲೆ ಬರೆದಿತ್ತು. ಅದಾದ ಬಳಿಕ 2011ರ ಏಕದಿನ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ ಜಯಿಸಿದೆ. ಆದರೆ ಆ ನಂತರ ಯಾವುದೇ ಐಸಿಸಿ ಟೂರ್ನಮೆಂಟ್ ಗೆಲ್ಲುವಲ್ಲಿ ವಿಫಲವಾಗಿದ್ದು, ಈ ಸಲವೂ ಅಭಿಮಾನಿಗಳು ತಂಡದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ:ಈ ತಂಡ ಟಿ20 ವಿಶ್ವಕಪ್ ಗೆಲ್ಲುತ್ತಂತೆ! ಇಂಗ್ಲೆಂಡ್ ಮಾಜಿ ನಾಯಕನ ಭವಿಷ್ಯ ನಿಜವಾಗುತ್ತಾ? - Eion Morgan