ನವದೆಹಲಿ:ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ 17 ಸದಸ್ಯರ ಟೀಂ ಇಂಡಿಯಾವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಪ್ರಕಟಿಸಿದೆ. ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣದಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಗಾಯಗೊಂಡಿರುವ ಶ್ರೇಯಸ್ ಅಯ್ಯರ್ ತಂಡದಿಂದ ಹೊರಬಿದ್ದಿದ್ದು, ವೇಗಿ ಆಕಾಶ್ ದೀಪ್, ಮೊಹಮದ್ ಸಿರಾಜ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆಂಧ್ರದ ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ ಗೆಲುವು ಸಾಧಿಸುವುದರೊಂದಿಗೆ ಸರಣಿಯನ್ನು 1-1 ರಿಂದ ಸಮಬಲ ಮಾಡಿಕೊಂಡಿದೆ. ಹೈದರಾಬಾದ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಕಂಡಿತ್ತು. ಮೂರನೇ ಪಂದ್ಯ ಫೆಬ್ರವರಿ 15 ರಿಂದ ಗುಜರಾತ್ನ ರಾಜ್‌ಕೋಟ್‌ನಲ್ಲಿ ಆರಂಭವಾಗಲಿದೆ.
ಜಡೇಜಾ, ರಾಹುಲ್ ಅನುಮಾನ:ಬಿಸಿಸಿಐ ಪ್ರಕಟಿಸಿರುವ ತಂಡದಲ್ಲಿ ಸ್ಟಾರ್ ಆಟಗಾರರಾದ ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಸ್ಥಾನ ಪಡೆದಿದ್ದರೂ, ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ತಂಡದ ವೈದ್ಯರ ನಿಗಾದಲ್ಲಿ ಇಬ್ಬರೂ ಆಟಗಾರರೂ ವೈದ್ಯಕೀಯ ಅನುಮತಿಯ ಮೇರೆಗೆ ಅವರು ತಂಡದಲ್ಲಿ ಮುಂದುವರಿಯುತ್ತಾರೋ, ಇಲ್ಲವೋ ಎಂಬುದು ಆಧರಿಸಿದೆ. ಜಡೇಜಾ ಮತ್ತು ರಾಹುಲ್ ಎರಡನೇ ಪಂದ್ಯದ ವೇಳೆ ಗಾಯಗೊಂಡಿದ್ದರು.
ಶ್ರೇಯಸ್ ಔಟ್, ಭರತ್ಗೆ ಮತ್ತೆ ಚಾನ್ಸ್:ತೊಡೆಸಂದು ಮತ್ತು ಕೆಳ ಬೆನ್ನಿನ ನೋವಿಗೆ ತುತ್ತಾಗಿರುವ ಬ್ಯಾಟರ್ ಶ್ರೇಯಸ್ ಅಯ್ಯರ್ ತಂಡದಿಂದ ಹೊರಬಿದ್ದಿದ್ದಾರೆ. ಸತತ ವೈಫಲ್ಯ ಕಾಣುತ್ತಿರುವ ವಿಕೆಟ್ ಕೀಪರ್ ಕೆಎಸ್ ಭರತ್ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 7 ಟೆಸ್ಟ್ ಪಂದ್ಯಗಳಲ್ಲಿ ಅವರು ಅರ್ಧಶತಕ ಕೂಡ ದಾಖಲಿಸಿಲ್ಲ. ಆದಾಗ್ಯೂ ಆಯ್ಕೆ ಸಮಿತಿ ಮತ್ತೊಂದು ಅವಕಾಶ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಇದೇ ಮೊದಲ ಬಾರಿಗೆ ಬಂಗಾಳದ ವೇಗಿ ಆಕಾಶ್ ದೀಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೊಹಮದ್ ಸಿರಾಜ್, ಆವೇಶ್ ಖಾನ್ ಬದಲಿಗೆ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ.
ಸರಣಿಗೆ ವಿರಾಟ್ ಅಲಭ್ಯ:ವೈಯಕ್ತಿಕ ಕಾರಣಗಳಿಗಾಗಿ ಮೊದಲೆರಡು ಪಂದ್ಯಗಳಿಂದ ಬಿಡುವು ಪಡೆದಿದ್ದ ವಿರಾಟ್ ಕೊಹ್ಲಿ ಉಳಿದ ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ ಎಂದು ಬಿಸಿಸಿಐ ದೃಢಪಡಿಸಿದೆ. ಈ ಬಗ್ಗೆ ವಿಶೇಷ ಟಿಪ್ಪಣಿ ನೀಡಿದ್ದು, ವೈಯಕ್ತಿಕ ಕಾರಣಗಳಿಂದಾಗಿ ಕೊಹ್ಲಿ ಸರಣಿಗೆ ಅಲಭ್ಯರಾಗಿದ್ದಾರೆ. ಅವರ ನಿರ್ಧಾರವನ್ನು ಸಂಪೂರ್ಣವಾಗಿ ತಂಡ ಗೌರವಿಸುತ್ತದೆ ಎಂದಿದೆ. ಕೌಟುಂಬಿಕ ವಿಚಾರಕ್ಕಾಗಿ ಕೊಹ್ಲಿ ಸದ್ಯ ವಿದೇಶದಲ್ಲಿದ್ದಾರೆ.
ತಂಡ ಹೀಗಿದೆ:ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್ ಮತ್ತು ಆಕಾಶ್ ದೀಪ್.
ಇದನ್ನೂ ಓದಿ:3ನೇ ಟೆಸ್ಟ್: ಹೊಸ ದಾಖಲೆಯ ಹೊಸ್ತಿಲಲ್ಲಿ ಅಶ್ವಿನ್, ಆ್ಯಂಡರ್ಸನ್