ನ್ಯೂಯಾರ್ಕ್ (ಅಮೆರಿಕ):ಕಳೆದ ಎರಡೂವರೆ ವರ್ಷಗಳಲ್ಲಿ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರು ತಂಡಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಕೋಚ್ ಹುದ್ದೆಯಿಂದ ಹೊರಹೋಗುವ ರಾಹುಲ್ ದ್ರಾವಿಡ್ ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದೇನೆ ಎಂದು ಭಾರತೀಯ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಭಾರತ ತಂಡದೊಂದಿಗೆ ಟಿ-20 ವಿಶ್ವಕಪ್ ತನ್ನ ಕೊನೆಯ ಟೂರ್ನಿಯಾಗಿದೆ ಎಂದು ದ್ರಾವಿಡ್ ಸೋಮವಾರ ಸ್ಪಷ್ಟಪಡಿಸಿದ್ದರು. ಅವರು ಸ್ಪಷ್ಟನೆ ನೀಡಿದ ಒಂದು ದಿನದ ಬಳಿಕ ಅಂದರೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ತನ್ನ ಮೊದಲ ನಾಯಕ ಹಾಗೂ ಮುಖ್ಯ ಕೋಚ್ ಬಗ್ಗೆ ಮಾತನಾಡುವಾಗ ಭಾವುಕರಾದರು. ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್ ಅವರನ್ನು ನೋಡಲಾಗುತ್ತಿದೆ. ಆದರೆ, ಅವರು ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ ಎಂದರು.
"ನಾನು ಅವರನ್ನು ತಂಡದ ಕೋಚ್ ಆಗಿ ಉಳಿಸಿಕೊಳ್ಳಲು ಮತ್ತು ಮನವೊಲಿಸಲು ಪ್ರಯತ್ನಿಸಿದೆ. ಆದರೆ, ನಿಸ್ಸಂಶಯವಾಗಿ ಅವರು ಕಾಳಜಿ ವಹಿಸಬೇಕಾದ ಬಹಳಷ್ಟು ವಿಷಯಗಳಿವೆ. ವೈಯಕ್ತಿಕವಾಗಿ ಅವರೊಂದಿಗೆ ನನ್ನ ಸಮಯವನ್ನು ಆನಂದಿಸಿರುವೆ. ಅವರು ಹೊರ ಹೋಗುವುದು ನನ್ನಿಂದ ನೋಡಲು ಸಾಧ್ಯವಿಲ್ಲ" ಎಂದು T20 ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದ ಮುನ್ನಾದಿನದಂದು ರೋಹಿತ್ ಶರ್ಮಾ ಹೇಳಿದರು.
ಈ ಸಂದರ್ಭದಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನು ಸ್ಮರಿಸಿಕೊಂಡ ರೋಹಿತ್, ರಾಹುಲ್ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿದ್ದೇನೆ ಎಂದರು. "ನಾನು ಐರ್ಲೆಂಡ್‌ಗೆ ಪದಾರ್ಪಣೆ ಮಾಡಿದಾಗ ಅವರು ನನ್ನ ಮೊದಲ ನಾಯಕರಾಗಿದ್ದರು. ನಾನು ಟೆಸ್ಟ್ ಪಂದ್ಯಗಳಿಗೆ ತಂಡಕ್ಕೆ ಬಂದಾಗ ಅವರ ಆಟವನ್ನು ಹತ್ತಿರದಿಂದ ನೋಡಿದ್ದೇನೆ. ನಮಗೆಲ್ಲರಿಗೂ ಅವರು ಆದರ್ಶಪ್ರಾಯರಾಗಿದ್ದಾರೆ " ಎಂದು ಹೇಳಿದರು.