ಕರ್ನಾಟಕ

karnataka

ETV Bharat / sports

ಪಿಚ್ ಬಗ್ಗೆ ಕಳವಳ: ಅನಿರೀಕ್ಷಿತ ಬೌನ್ಸ್, ಆಟಗಾರರ ಸುರಕ್ಷತೆಯ ಕಳವಳದ ಬೆನ್ನಲ್ಲೆ ಐಸಿಸಿ ಹೇಳಿದ್ದಿಷ್ಟು! - T20 World Cup 2024

T20 World Cup 2024: ನ್ಯೂಯಾರ್ಕ್‌ನ ಪಿಚ್​ಗಳಲ್ಲಿ ಉಂಟಾಗುವ ಅನಿರೀಕ್ಷಿತ ಬೌನ್ಸ್ ಹಾಗೂ ಆಟಗಾರರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೆ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಪರಿಸ್ಥಿತಿಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದೆ.

T20 World Cup 2024 Icc Admits New York Pitch Not Up To Mark Says It Will Remedy The Situation
ನ್ಯೂಯಾರ್ಕ್‌ನ ಪಿಚ್ (IANS)

By ETV Bharat Karnataka Team

Published : Jun 7, 2024, 1:02 PM IST

Updated : Jun 7, 2024, 3:21 PM IST

ನವದೆಹಲಿ: ಪುರುಷರ ಅಂತಾರಾಷ್ಟ್ರೀಯ ಟಿ20 ವಿಶ್ವಕಪ್​​ಗಾಗಿ ಸಿದ್ಧಗೊಂಡಿರುವ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಪಿಚ್‌ಗಳು ನಿರೀಕ್ಷೆಗೆ ತಕ್ಕಂತೆ ಉತ್ತಮವಾಗಿಲ್ಲ ಎಂದು ಒಪ್ಪಿಕೊಂಡಿರುವ ಐಸಿಸಿ ಉಳಿದ ಪಂದ್ಯಗಳಲ್ಲಿ ಪರಿಸ್ಥಿತಿಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದೆ. ಅಲ್ಲದೇ ಈ ಮುನ್ನ ಪಿಚ್​ಗಳ ಪರಿಸ್ಥಿತಿಯ ಬಗ್ಗೆ ಕಳವಳ ಕೂಡ ವ್ಯಕ್ತಪಡಿಸಿದೆ.

ನ್ಯೂಯಾರ್ಕ್‌ನ ಪಿಚ್​ಗಳು ಟಿ20 ಟೂರ್ನಮೆಂಟ್ ತನಕ ಪರೀಕ್ಷೆಗೆ ಒಳಗಾಗಿರಲಿಲ್ಲ. ಹಾಗಾಗಿ ಬೌಲರ್​ಗಳಿಗೆ ಹೆಚ್ಚು ನೆರವಾಗುತ್ತಿರುವ ಪಿಚ್ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಇದೇ ಮೈದಾನದಲ್ಲಿ ಆಡಿದ ಎರಡು ಪಂದ್ಯಗಳಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ರನ್​ಗಳಿಗಿಂತ ಅಧಿಕ ವಿಕೆಟ್​ ಅನ್ನೇ ಕಳೆದುಕೊಂಡಿದ್ದು ಕೂಡ ಕಳವಳಕ್ಕೆ ಕಾರಣವಾಗಿದೆ.

ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 77 ರನ್​ಗೆ ಆಲೌಟ್​​ ಆಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ ತಂಡ ತನ್ನ ಪಾಲಿನ 19.1 ಒವರ್‌ಗಳಿಗೆ 77 ರನ್‌ ಗಳಿಸಲಷ್ಟೇ ಶಕ್ತವಾಯಿತು. ದಕ್ಷಿಣ ಆಫ್ರಿಕಾ ಕೂಡ 16.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಈ ಕಡಿಮೆ ಸ್ಕೋರ್ ಪಂದ್ಯದಲ್ಲೂ ಶ್ರೀಲಂಕಾ, ಎದುರಾಳಿ ತಂಡವನ್ನು ನಿಯಂತ್ರಿಸಲು ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿತ್ತು. ಕಡಿಮೆ ಮೊತ್ತದ ಗುರಿ ಪಡೆದರೂ ದಕ್ಷಿಣ ಆಫ್ರಿಕಾ ಗೆಲ್ಲಲು 16.2 ಓವರ್‌ಗಳವರೆಗೂ ಕಾಯಬೇಕಾಯಿತು.

ಇನ್ನು ಭಾರತ ತಂಡ ಇದೇ ಪಿಚ್​ನಲ್ಲಿ ಐರ್ಲೆಂಡ್​ ತಂಡವನ್ನು ಕೇವಲ 96 ರನ್​ಗೆ ಕಟ್ಟಿ ಹಾಕಿತ್ತು. ವಿಕೆಟ್​ಗಳ ಸುರಿಮಳೆ ಕಂಡು ಅಭಿಮಾನಿಗಳು ಅಸಮಾಧಾನ ಹೊರಹಾಕಿದ ಪ್ರಸಂಗ ನಡೆಯಿತು. ಕಾರಣ ಐರ್ಲೆಂಡ್ ವಿಕೆಟ್​ಗಳು ರನ್​ಗಿಂತ ವೇಗವಾಗಿಯೇ ಉರುಳುತ್ತಿದ್ದವು. ಇಂಥಾ ಪಿಚ್ ಜೊತೆಗೆ ನಿಧಾನಗತಿಯ ಔಟ್ ಫೀಲ್ಡ್ ಪ್ರೇಕ್ಷಕರನ್ನು ಅಸಹನೆಗೆ ದೂಡಿತ್ತು. ಇನ್ನು ಅನಿರೀಕ್ಷಿತ ಬೌನ್ಸ್ ಹಾಗೂ ಪಿಚ್​ಗಳ ವರ್ತನೆಯು ಆಟಗಾರರ ಸುರಕ್ಷತೆಯ ಬಗ್ಗೆ ಕಳವಳ ಹುಟ್ಟುಹಾಕಿದೆ. ಅಲ್ಲದೇ ಪಿಚ್‌ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿಕೆಟ್‌ಕೀಪರ್ ಕಂ ಬ್ಯಾಟ್ಸ್‌ಮನ್ ರಿಷಭ್​ ಪಂತ್ ಬೌನ್ಸ್‌ನಿಂದ ಗಾಯಗೊಂಡ ಪ್ರಸಂಗ ಕೂಡ ನಡೆದಿದ್ದು ತೀವ್ರ ಟೀಕೆಗೆ ವ್ಯಕ್ತವಾಗಿದೆ. ಐರ್ಲೆಂಡ್ ತಂಡ ನೀಡಿದ್ದ ಅಲ್ಪ ಮೊತ್ತ ಬೆನ್ನು ಹತ್ತಿದ ಭಾರತ, 12.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಈ ಗುರಿ ತಲುಪಿತು.

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಇದೇ ಪಿಚ್​ನಲ್ಲಿ ಭಾನುವಾರ (ಜೂನ್ 9) ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಅತಿದೊಡ್ಡ ರೋಚಕ ಪಂದ್ಯವು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಜಗತ್ತಿನಾದ್ಯಂತದ ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಿಚ್ ಪಂದ್ಯದ ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಕ್ರೀಡಾಂಗಣದಲ್ಲಿ ನಡೆಯಲಿರುವ ಬಿಗ್ ಫೈಟ್​ಗೂ ಮುನ್ನ ಐಸಿಸಿ ಈ ಕುರಿತು ಹೇಳಿಕೆ ನೀಡಿದೆ.

ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಲ್ಲಿಯವರೆಗೆ ಬಳಸಲಾದ ಪಿಚ್‌ಗಳು ನಾವು ಬಯಸಿದಷ್ಟು ಉತ್ತಮವಾಗಿಲ್ಲ ಎಂದು ಐಸಿಸಿ ಅತೃಪ್ತಿ ವ್ಯಕ್ತಪಡಿಸಿದೆ. ಮುಂಬರುವ ಪಂದ್ಯಕ್ಕೂ ಮುನ್ನ ಸಂಭಾವ್ಯ ಕ್ರಮಗಳನ್ನು ಕೈಗೊಳ್ಳಲು ಶ್ರಮಿಸುವುದಾಗಿಯೂ ತಿಳಿಸಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ವೇಗದ ಬೌಲಿಂಗ್ ಮಾಡುವ ಬೌಲರ್‌ಗಳನ್ನು ಹೊಂದಿದ್ದು, ಈ ಪಿಚ್‌ನ ಅಸಮತೋಲನ ಬೌನ್ಸ್‌ನಿಂದ ಎರಡೂ ತಂಡದ ಆಟಗಾರರಿಗೆ ಗಾಯವಾಗುವ ಅಪಾಯವಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಹಾಗಾಗಿ ಐಸಿಸಿ ಪಿಚಿಂಗ್ ತಜ್ಞರ ತಂಡವು ಈ ಅಸಮತೋಲನವನ್ನು ಹೇಗೆ ತಗ್ಗಿಸುತ್ತದೆ ಎಂಬುದನ್ನು ನೋಡಬೇಕಾಗಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್: ಸೂಪರ್​ ಓವರ್​ನಲ್ಲಿ ಯುಎಸ್​ಗೆ ಐತಿಹಾಸಿಕ ಗೆಲುವು; ಪಾಕಿಸ್ತಾನಕ್ಕೆ ಮುಖಭಂಗ - Usa Beats Pakistan

Last Updated : Jun 7, 2024, 3:21 PM IST

ABOUT THE AUTHOR

...view details