ಕಿಂಗ್‌ಸ್ಟೌನ್: ಟಿ20 ವಿಶ್ವಕಪ್ 2024ರ ಆವೃತ್ತಿಯಲ್ಲಿ ಅಫ್ಘಾನಿಸ್ತಾನ ತಂಡವು ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಸೈಂಟ್ ವಿನ್ಸೆಂಟ್‌ನ ಅರ್ನೋಸ್ ವೇಲ್ ಮೈದಾನದಲ್ಲಿ ಮಂಗಳವಾರ ನಡೆದ ಸೂಪರ್ 8 ಹಂತದ ರೋಚಕ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು 8 ರನ್‌ಗಳ ಸೋಲಿಸುವ ಮೂಲಕ ರಶೀದ್ ಖಾನ್ ಬಳಗದ ಆಫ್ಘನ್ ತಂಡ, ಚುಟುಕು ಪಂದ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸೆಮೀಸ್ ಟಿಕೆಟ್ ಗಿಟ್ಟಿಸಿಕೊಂಡಿದೆ.
ಬಾಂಗ್ಲಾ ವಿರುದ್ಧದ ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಸೋತರೆ ಆಸ್ಟ್ರೇಲಿಯಾಗೆ ಸೆಮಿಫೈನಲ್‌ಗೆ ಹೋಗುವ ಅವಕಾಶವಿತ್ತು. ಆದರೆ, ವಿಧಿಲಿಖಿತ ಎಂಬಂತೆ ಅಫ್ಘಾನಿಸ್ತಾನ ಸೆಮೀಸ್ ಟಿಕೆಟ್ ಪಡೆದಿದ್ದು, ಸೆಮಿಫೈನಲ್ ಕನಸು ಕಾಣುತ್ತಿದ್ದ ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ನಿಂದ ಹೊರಬಿದ್ದಂತಾಗಿದೆ.
ಟಾಸ್ ಗೆದ್ದು ಮಳೆಬಾಧಿತ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ನಿಗದಿತ 20 ಓವರ್‌ಗಳಲ್ಲಿ 115 ರನ್ ಗಳಿಸಿತು. ಮಳೆಯಿಂದಾಗಿ 19 ಓವರ್‌ಗಳಲ್ಲಿ 114 ರನ್ ಗುರಿ ನೀಡಲಾಗಿತ್ತು. ಈ ಗುರಿ ಬೆನ್ನುಹತ್ತಿದ ಬಾಂಗ್ಲಾದೇಶವು 17.5 ಓವರ್‌ಗಳಲ್ಲಿ ಕೇವಲ 105 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಉಭಯ ತಂಡಗಳ ನಡುವೆ ನಡೆದ ರೋಚಕ ಪಂದ್ಯ ಇದಾಗಿದ್ದರಿಂದ ಕೊನೆಯವರೆಗೂ ಕುತೂಹಲ ಮೂಡಿಸಿತ್ತು. ಅಮೋಘ ಬೌಲಿಂಗ್ ಮಾಡುವ ಮೂಲಕ ಅಫ್ಘಾನಿಸ್ತಾನ ತಂಡ ಡಕ್ ವರ್ಥ್ ಲೂಯಿಸ್ ನಿಯಮದಂತೆ 8 ರನ್‌ಗಳಿಂದ ಗೆಲುವು ಸಾಧಿಸಿದೆ ಎಂದು ಘೋಷಿಸಲಾಯಿತು. ಈ ಮೂಲಕ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿ, ಇತಿಹಾಸ ನಿರ್ಮಿಸಿದೆ.
ಔಟಾಗದೆ ಉಳಿದ ದಾಸ್: 49 ಎಸೆತಗಳನ್ನು ಎದುರಿಸಿದ ಬಾಂಗ್ಲಾ ಆಟಗಾರ ಲಿಟ್ಟನ್ ದಾಸ್ ಒಂದು ಸಿಕ್ಸ್ ಮತ್ತು 5 ಬೌಂಡರಿಗಳ ಸಹಿತ ಅಜೇಯ 54 ರನ್ ಗಳಿಸಿದರು. ಆರಂಭಿಕರಾಗಿ ಕಣಕ್ಕಿಳಿದು ಕೊನೆಯವರೆಗೂ ಔಟಾಗದೇ ಉಳಿದರು. ಅಜೇಯ ಅರ್ಧಶತಕ ಸಿಡಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಅವರಿಂದಾಗಲಿಲ್ಲ. ಸೌಮ್ಯ ಸರ್ಕಾರ್ (10), ತೌಹಿದ್ ಹ್ರಿದೋಯ್ (14) ತಮ್ಮ ಅಲ್ಪ ಕಾಣಿಕೆ ನೀಡಿದರೆ, ಉಳಿದರು ಯಾರೂ ಹೆಚ್ಚು ಹೊತ್ತು ನಿಲ್ಲಲಿಲ್ಲ.