ಟೆಕ್ಸಾಸ್, ಅಮೆರಿಕ:ಇಲ್ಲಿನ ಗ್ರ್ಯಾಂಡ್ ಪ್ರೈರೀ ಮೈದಾನದಲ್ಲಿ ಮಂಗಳವಾರ ಮಳೆಯಿಂದ ತಡವಾಗಿ ಆರಂಭವಾದ ಟಿ20 ವಿಶ್ವಕಪ್ ಪಂದ್ಯದಲ್ಲಿ ತೀವ್ರ ಪೈಪೋಟಿಯ ನಡುವೆಯೂ ನೆದರ್ಲೆಂಡ್ಸ್ ತಂಡ ನೇಪಾಳವನ್ನು 6 ವಿಕೆಟ್ಗಳಿಂದ ಮಣಿಸಿತು. ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ಗೆದ್ದು ಬೀಗಿತು.
ಟಾಸ್ ಗೆದ್ದ ಡಚ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ನಾಯಕ ರೋಹಿತ್ ಪೌಡೆಲ್ ಗಳಿಸಿದ 35 ರನ್ ನೆರವಿನೊಂದಿಗೆ ನೇಪಾಳ ತಂಡ 19.2 ಓವರ್‌ಗಳಲ್ಲಿ 106 ರನ್‌ಗಳಿಗೆ ಆಲೌಟ್ ಆಯಿತು. ಟಿಮ್ ಪ್ರಿಂಗಲ್ (20/3) ಮತ್ತು ಲೋಗನ್ ವ್ಯಾನ್ ಬೀಕ್ (18/3) ಮಾರಕ ದಾಳಿಗೆ ಸಿಲುಕಿದ ನೇಪಾಳ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು. ನಿರಂತರ ವಿಕೆಟ್ ಪತನದಿಂದ ಅಲ್ಪ ಮೊತ್ತಕ್ಕೆ ತಂಡ ಆಲೌಟ್ ಆಯಿತು.
107 ರನ್ ಗುರಿ ಬೆನ್ನಟ್ಟಿದ ಡಚ್ಚರಿಗೆ ಆರಂಭಿಕ ಆಟಗಾರ ಮ್ಯಾಕ್ಸ್ ಒಡೌಡ್ 48 ಎಸೆತಗಳಲ್ಲಿ ಅಜೇಯ 54 ರನ್ ಬಾರಿಸುವ ಯಶಸ್ವಿ ಚೇಸ್ ಮುನ್ನಡೆಸಿದರು. ನೆದರ್ಲೆಂಡ್ಸ್ ತಂಡವು 18.4 ಓವರ್‌ಗಳಲ್ಲಿ 4 ವಿಕೆಟ್ಗೆ 109 ರನ್ ಬಾರಿಸುವ ಮೂಲಕ ಗೆಲುವು ಸಾಧಿಸಿತು. ನೇಪಾಳ ಪರ ಸೋಂಪಾಲ್ ಕಾಮಿ, ದೀಪೇಂದ್ರ ಸಿಂಗ್ ಐರಿ ಮತ್ತು ಅಬಿನಾಶ್ ಬೋಹರಾ ತಲಾ ಒಂದು ವಿಕೆಟ್ ಪಡೆದರು.
16ನೇ ಓವರ್‌ನಲ್ಲಿ ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ (5) ಅವರನ್ನು ಬೌಲ್ಡ್ ಮಾಡಿದ ಬೋಹರಾ ನೇಪಾಳಕ್ಕೆ ಗೆಲುವಿನ ಆಸೆ ಮೂಡಿಸಿದ್ದರು. ಆದರೆ, ಒಡೌಡ್ ಮತ್ತು ಬಾಸ್ ಡಿ ಲೀಡೆ (ಔಟಾಗದೆ 11) ಅಜೇಯ 29 ರನ್‌ಗಳ ಜೊತೆಯಾಟದ ಮೂಲಕ ಡಚ್ ತಂಡವನ್ನು ಜಯದ ದಡ ಸೇರಿಸಿದರು.
ಇಂಗ್ಲೆಂಡ್ - ಸ್ಕಾಟ್ಲೆಂಡ್ ಪಂದ್ಯ ಮಳೆಗೆ ಆಹುತಿ:ಮಧ್ಯಂತರ ಮಳೆಯಿಂದಾಗಿ ಮಂಗಳವಾರ ಬಾರ್ಬಡೋಸ್ನ ಬ್ರಿಡ್ಜ್ಟೌನ್ನಲ್ಲಿನ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ನಡುವಿನ ಟಿ20 ವಿಶ್ವಕಪ್ನ ಮತ್ತೊಂದು ಹಣಾಹಣಿ ರದ್ದಾಯಿತು. ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡವು.
ಇನ್ನಿಂಗ್ಸ್ ಆರಂಭಿಸಿದ ಸ್ಕಾಟ್ಲೆಂಡ್ 6.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 51 ರನ್ ಗಳಿಸಿತ್ತು. ಆಗ ಭಾರಿ ಮಳೆ ಹಾಗೂ ದೀರ್ಘ ಅಡಚಣೆಯಿಂದಾಗಿ ಎರಡು ಇನ್ನಿಂಗ್ಸ್‌ಗಳನ್ನು ತಲಾ 10 ಓವರ್‌ಗಳಿಗೆ ಮೊಟಕುಗೊಳಿಸಲಾಯಿತು. ಬಳಿಕ ಸ್ಕಾಟ್ಲೆಂಡ್ ವಿಕೆಟ್ ನಷ್ಟವಿಲ್ಲದೆ 90 ರನ್ ಗಳಿಸಿತು.
ಇಂಗ್ಲೆಂಡ್ಗೆ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 109 ರನ್ ಗುರಿ ನೀಡಲಾಗಿತ್ತು. ಆದರೆ ಇನ್ನಿಂಗ್ಸ್ ವಿರಾಮದ ವೇಳೆ ಮತ್ತೆ ಮಳೆ ಆರಂಭವಾಗಿದ್ದರಿಂದ ಪಂದ್ಯ ಮುಂದುವರೆಯಲಿಲ್ಲ. ಸ್ಕಾಟ್ಲೆಂಡ್ ಪರ ಮೈಕಲ್ ಜೋನ್ಸ್ 30 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ ಔಟಾಗದೇ 45 ರನ್ ಹಾಗೂ ಜಾರ್ಜ್ ಮನ್ಸೆ 31 ಎಸೆತಗಳಲ್ಲಿ ಅಜೇಯ 41 ರನ್ ಬಾರಿಸಿದ್ದರು. ಇಬ್ಬರೂ ಬ್ಯಾಟರ್ಗಳು ಕೆಲ ಆಕರ್ಷಕ ಹೊಡೆತಗಳನ್ನು ಪ್ರದರ್ಶಿಸಿದರು.
ಹಾಲಿ ಚಾಂಪಿಯನ್ ಇಂಗ್ಲೆಂಡ್ ಪರ, ಕ್ರಿಸ್ ಜೋರ್ಡನ್ ಮತ್ತು ಆದಿಲ್ ರಶೀದ್ ದುಬಾರಿಯಾದರು. ಸ್ಕಾಟಿಷ್ ಆರಂಭಿಕ ಜೋಡಿ ಮೇಲೆ ಪ್ರಭಾವ ಬೀರುವಲ್ಲಿ ವಿಫಲರಾದರು. ಸ್ಕಾಟ್ಲೆಂಡ್ ತಂಡ ಕೆನ್ಸಿಂಗ್ಟನ್ ಓವಲ್‌ನಲ್ಲಿ ಶುಕ್ರವಾರ ನಮೀಬಿಯಾ ವಿರುದ್ಧ ಆಡಲಿದೆ. ಮತ್ತೊಂದೆಡೆ, ಇಂಗ್ಲೆಂಡ್ ಶನಿವಾರ ಇದೇ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್: ಇಂದು ಭಾರತ - ಐರ್ಲೆಂಡ್ ಹಣಾಹಣಿ; ಶುಭಾರಂಭಕ್ಕೆ ರೋಹಿತ್ ಪಡೆ ಸಜ್ಜು - India vs Ireland