ಉತ್ತರ ಪ್ರದೇಶ:ಲಕ್ನೋದಲ್ಲಿ ಆಯೋಜಿಸಲಾದ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಟೂರ್ನಮೆಂಟ್‌ನಲ್ಲಿ ಇಂದು ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ಚೀನಾದ ಆಟಗಾರ್ತಿ ಲುವೊ ಯು ವು ವಿರುದ್ಧ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಫೈನಲ್ ಪಂದ್ಯದಲ್ಲಿ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾದ ಸಿಂಧು, ಚೀನಾ ಆಟಗಾರ್ತಿಗೆ ಎರಡೂ ಸೆಟ್‌ಗಳಲ್ಲಿ ತಿರುಗೇಟು ನೀಡುವ ಅವಕಾಶವನ್ನು ನೀಡಲಿಲ್ಲ. ಮೊದಲ ಸೆಟ್‌ನಿಂದಲೇ ಚೀನಾದ ಆಟಗಾರ್ತಿ ಲುವೊ ಯು ವು ಮೇಲೆ ಒತ್ತಡ ಹೇರಿದ ಸಿಂಧು 21-14ರಿಂದ ಮೊದಲ ಸೆಟ್ ಗೆದ್ದರು.
ಇದಾದ ಬಳಿಕ ಎರಡನೇ ಸೆಟ್‌ನಲ್ಲೂ ತಮ್ಮ ಅಮೋಘ ಪ್ರದರ್ಶನ ಮುಂದುವರಿಸಿದ ಸಿಂಧು 21-16ರಿಂದ ಎರಡನೇ ಸೆಟ್ ಗೆದ್ದು ಪಂದ್ಯ ಗೆದ್ದುಕೊಂಡರು. ಈ ಮೂಲಕ 29 ವರ್ಷ ವಯಸ್ಸಿನ ಮಾಜಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಮೂರನೇ ಬಾರಿಗೆ ಸೈಯದ್ ಮೋದಿ ಇಂಟರ್ನ್ಯಾಷನಲ್ ಟೂರ್ನಮೆಂಟ್ ಪ್ರಶಸ್ತಿ ಜಯಿಸಿದ್ದಾರೆ. ಇದಕ್ಕೂ ಮೊದಲು 2017 ಮತ್ತು 2022ರಲ್ಲಿ ಈ ಟೂರ್ನಿ ಗೆದ್ದಿದ್ದರು.
ಈ ಜಯದೊಂದಿಗೆ ಎರಡು ವರ್ಷ ನಾಲ್ಕು ತಿಂಗಳ ನಂತರ ಪಿ.ವಿ.ಸಿಂಧು ಪ್ರಶಸ್ತಿಯ ಬರ ನೀಗಿಸಿಕೊಂಡಿದ್ದಾರೆ. 2022ರ ಜುಲೈನಲ್ಲಿ ನಡೆದಿದ್ದ ಸಿಂಗಾಪುರ್ ಓಪನ್‌ನಲ್ಲಿ ಕೊನೆಯ ಬಾರಿ ಪ್ರಶಸ್ತಿ ಗೆದ್ದಿದ್ದರು.
ಇದನ್ನೂ ಓದಿ:ಒಂದೇ ಇನ್ನಿಂಗ್ಸ್ನಲ್ಲಿ ಹ್ಯಾಟ್ರಿಕ್ ಜೊತೆಗೆ ಎಲ್ಲಾ 10 ವಿಕೆಟ್ ಉರುಳಿಸಿದ ಬಿಹಾರದ ವೇಗಿ!