ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ವಿಧಾನಸಭೆಯಿಂದ ಹೊರನಡೆಯುವ ಮೂಲಕ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದೆ ಕನಿಮೋಳಿ ಕರುಣಾನಿಧಿ ಹೇಳಿದ್ದಾರೆ. ಚೆನ್ನೈನ ಸೈದಾಪೇಟ್ ನಲ್ಲಿ ಸೋಮವಾರ ಡಿಎಂಕೆ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಅನಗತ್ಯವಾಗಿ ರಾಜಕೀಯ ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಸಿದ್ಧಪಡಿಸಿದ ಸಾಂಪ್ರದಾಯಿಕ ಭಾಷಣವನ್ನು ಓದದೆ ರಾಜ್ಯಪಾಲರು ಸೋಮವಾರ (ಜನವರಿ 6) ರಾಜ್ಯ ವಿಧಾನಸಭೆಯಿಂದ ಹೊರನಡೆದಿದ್ದನ್ನು ಅವರು ಉಲ್ಲೇಖಿಸಿದರು. ಲೋಕಸಭೆಯಲ್ಲಿ ತೂತುಕುಡಿ ಕ್ಷೇತ್ರವನ್ನು ಪ್ರತಿನಿಧಿಸುವ ಕನಿಮೋಳಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಡಿಎಂಕೆ ಸರ್ಕಾರಕ್ಕೆ ತೊಂದರೆ ನೀಡುವ ಮತ್ತು ತಮಿಳು ಜನರನ್ನು ಅವಮಾನಿಸುವ ಉದ್ದೇಶದಿಂದ ಆರ್.ಎನ್.ರವಿ ಅವರನ್ನು ತಮಿಳುನಾಡಿನ ರಾಜ್ಯಪಾಲರಾಗಿ ನೇಮಿಸಿದೆ ಎಂದು ಹೇಳಿದರು.
"ರಾಜ್ಯಪಾಲರ ಸ್ಥಾನವು ರಾಜಕೀಯ ಮಾಡುವ ಹುದ್ದೆಯಲ್ಲ. ರಾಜ್ಯಪಾಲರು ತಮಿಳುನಾಡು ವಿಧಾನಸಭೆಗೆ ಅಗೌರವ ತೋರಿರುವುದು ಇದು ಮೂರನೇ ಬಾರಿ. ವಿಧಾನಸಭೆಯನ್ನುದ್ದೇಶಿಸಿ ಮಾತನಾಡುವುದು ಸೇರಿದಂತೆ ತಮ್ಮ ಜವಾಬ್ದಾರಿಗಳನ್ನು ಪೂರೈಸಲು ರಾಜ್ಯಪಾಲರು ಸಿದ್ಧರಿಲ್ಲದಿದ್ದರೆ ಅವರು ತಮ್ಮ ಹುದ್ದೆ ತ್ಯಜಿಸಲು ಮುಕ್ತರಾಗಿದ್ದಾರೆ. ಅವರು ಹೀಗೆಯೇ ಮಾಡುತ್ತಿದ್ದರೆ ಅವರನ್ನು ವಾಪಸ್ ಕಳುಹಿಸುವ ದಿನ ದೂರವಿಲ್ಲ" ಎಂದು ಕನಿಮೋಳಿ ತಿಳಿಸಿದರು.
ಪ್ರತಿಭಟನಾ ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿ, ವಿಧಾನಸಭೆಯಲ್ಲಿ ಸರ್ಕಾರ ಸಿದ್ಧಪಡಿಸಿದ ಭಾಷಣ ಓದದಿರುವುದನ್ನು ಸಮರ್ಥಿಸಿಕೊಳ್ಳಲು ರಾಜ್ಯಪಾಲರು ಕುಂಟು ನೆಪ ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಡಿಎಂಕೆ ಸರ್ಕಾರದ ಕಾರ್ಯಕ್ಷಮತೆಯು ಬಿಜೆಪಿ ಆಡಳಿತದ ರಾಜ್ಯಗಳಿಗಿಂತ ಉತ್ತಮವಾಗಿರುವುದರಿಂದ ನಮ್ಮ ಸರ್ಕಾರದ ಬಗ್ಗೆ ರಾಜ್ಯಪಾಲರು ಅಸೂಯೆ ಪಡುತ್ತಿದ್ದಾರೆ ಎಂದು ಭಾರತಿ ಆರೋಪಿಸಿದರು.
ಜನವರಿ 6 ರಂದು ಅಧಿವೇಶನ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ರಾಜ್ಯಪಾಲ ಆರ್.ಎನ್.ರವಿ ಅವರು ರಾಜ್ಯ ವಿಧಾನಸಭೆಯಿಂದ ಹೊರನಡೆದಿದ್ದರು. ರಾಷ್ಟ್ರಗೀತೆಯನ್ನು ಹಾಡದಿರುವ ವಿಧಾನಸಭೆಯ ನಿರ್ಧಾರವನ್ನು ಖಂಡಿಸಿ ಅವರು ಸದನದಿಂದ ಹೊರ ನಡೆದಿದ್ದರು.
ತಮಿಳುನಾಡು ವಿಧಾನಸಭೆಯಲ್ಲಿ ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅವಮಾನ ಮಾಡಲಾಗಿದೆ ಎಂದು ತಮಿಳುನಾಡು ರಾಜಭವನ ಹೇಳಿಕೆಯಲ್ಲಿ ತಿಳಿಸಿದೆ. ರಾಷ್ಟ್ರಗೀತೆಯನ್ನು ಹಾಡುವ ಸಾಂವಿಧಾನಿಕ ಜವಾಬ್ದಾರಿಯ ಬಗ್ಗೆ ರಾಜ್ಯಪಾಲರು ಜ್ಞಾಪನೆ ಮಾಡಿದ ಹೊರತಾಗಿಯೂ, ತಮಿಳ್ ಥಾಯ್ ವಾಝ್ತು (ತಮಿಳುನಾಡಿನ ರಾಜ್ಯ ಗೀತೆ) ಅನ್ನು ಮಾತ್ರ ಹಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : 'ಕೇಂದ್ರ ಸರ್ಕಾರ ನನ್ನ ಅಧಿಕೃತ ನಿವಾಸ ಕಸಿದುಕೊಂಡಿದೆ': ದೆಹಲಿ ಸಿಎಂ ಅತಿಶಿ ಆರೋಪ - ATISHI ACCUSES BJP