ಈ ತಿಂಗಳ ಕೊನೆಯಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಭಾರತ ತಂಡವನ್ನ ಗುರುವಾರ ಪ್ರಕಟಿಸಲಾಯಿತು. ಚುಟುಕು ಮಾದರಿಯ ಪಂದ್ಯಗಳಿಗೆ ಸೂರ್ಯಕುಮಾರ್ ಯಾದವ್ ನಾಯಕನಾದರೆ, ಏಕದಿನ ಪಂದ್ಯಗಳಿಗೆ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿ ಮುಂದುವರಿಯಲಿದ್ದಾರೆ. ಹಾರ್ದಿಕ್ ಪಾಂಡ್ಯಗೆ ಎರಡೂ ಮಾದರಿಯಲ್ಲಿ ಯಾವುದೇ ಹೊಣೆಗಾರಿಕೆ ನೀಡಲಾಗಿಲ್ಲ. ಎರಡೂ ಸರಣಿಗಳಿಗೆ ಶುಭ್ಮನ್ಗಿಲ್ಗೆ ಉಪನಾಯಕತ್ವ ನೀಡಲಾಗಿದೆ.
ನಿರೀಕ್ಷೆಯಂತೆ ಹಾರ್ದಿಕ್ರ ಬದಲಿಗೆ ಟಿ-20 ಮಾದರಿಗೆ ಹೊಸ ನಾಯಕನ ಆಯ್ಕೆಯಾಗಿದೆ. ಸೂರ್ಯಕುಮಾರ್ ಯಾದವ್ಗೆ ನಾಯಕತ್ವ ಪಟ್ಟ ಕಟ್ಟಲಾಗುತ್ತದೆ ಎಂದು ವರದಿಯಾಗಿತ್ತು. ಅದರಂತೆ ಸೂರ್ಯಗೆ ಕ್ಯಾಪ್ಟನ್ಸಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ ಆಗಾಗ್ಗೆ ಗಾಯದ ಸಮಸ್ಯೆ ಎದುರಿಸುತ್ತಿರುವ ಕಾರಣ ಸ್ಥಿರ ನಾಯಕತ್ವ ಕಾಪಾಡಲು ಸೂರ್ಯಗೆ ಮಣೆ ಹಾಕಲಾಗಿದೆ.
ಗಿಲ್ಗೆ ಧಮಾಕಾ, ಹಾರ್ದಿಕ್ಗೆ ಕೊಕ್:ಇತ್ತೀಚೆಗೆ ಮುಗಿದ ಜಿಂಬಾಬ್ವೆ ಪ್ರವಾಸದಲ್ಲಿ ಭಾರತವನ್ನು ಮುನ್ನಡೆಸಿದ್ದ ಶುಭಮನ್ ಗಿಲ್ ಏಕದಿನ ಮತ್ತು ಟಿ20 ತಂಡಗಳಿಗೆ ಉಪನಾಯಕರಾಗಿದ್ದಾರೆ. ಏಕದಿನ ವಿಶ್ವಕಪ್ ಮತ್ತು ಟಿ20 ವಿಶ್ವಕಪ್‌ನಲ್ಲಿ ಉಪನಾಯಕರಾಗಿದ್ದ ಹಾರ್ದಿಕ್ ಬದಲಿಗೆ ಯುವ ಆಟಗಾರನಿಗೆ ಪಟ್ಟ ಕಟ್ಟಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಹಾರ್ದಿಕ್ ಅವರ ಫಿಟ್‌ನೆಸ್ ಬಗ್ಗೆ ಆಯ್ಕೆ ಸಮಿತಿ ಅಸಮಾಧಾನ ಹೊಂದಿದೆ. ಹೀಗಾಗಿ ಅವರನ್ನು ಉಪನಾಯಕ ಸ್ಥಾನದಿಂದ ಕೈಬಿಡಲಾಗಿದೆ.
ಜಿಂಬಾಬ್ವೆ ಸರಣಿಯಲ್ಲಿ ಅಬ್ಬರಿಸಿದ್ದ ರುತುರಾಜ್ ಗಾಯಕ್ವಾಡ್ ಮತ್ತು ಅಭಿಷೇಕ್ ಶರ್ಮಾರನ್ನು ಸರಣಿಗೆ ಪರಿಗಣಿಸಿಲ್ಲ. ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್ರನ್ನು ತಂಡದಲ್ಲಿ ಮುಂದುವರಿಸಲಾಗಿದೆ. ಕೆಎಲ್ ರಾಹುಲ್ಗೆ ತಂಡದಲ್ಲಿ ಕೊಕ್ ನೀಡಲಾಗಿದೆ. ಯಜುವೇಂದ್ರ ಚಹಲ್ ಬದಲಿಗೆ ರವಿ ಬಿಷ್ಣೋಯ್ಗೆ ಅವಕಾಶ ನೀಡಲಾಗಿದೆ
ಏಕದಿನ ತಂಡಕ್ಕೆ ವಾಪಸ್ಸಾದ ರಾಹುಲ್, ಅಯ್ಯರ್:ಏಕದಿನ ತಂಡವನ್ನೂ ಪ್ರಕಟಿಸಲಾಗಿದ್ದು, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ವಾಪಸ್ ಆಗಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸರಣಿಗೆ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇಬ್ಬರೂ ತಂಡದಲ್ಲಿದ್ದಾರೆ. ರೋಹಿತ್ ನಾಯಕರಾಗಿ ಮುಂದುವರಿಯಲಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ, ಆಲ್ರೌಂಡರ್ ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ.