Rishab Pant IPL Retention: ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಿಷಭ್ ಪಂತ್ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವುದು ಕ್ರೀಡಾ ವಲಯಗಳಲ್ಲಿ ಚರ್ಚೆಯ ವಿಷಯವಾಗಿದೆ. ಡ್ಯಾಶಿಂಗ್ ಬ್ಯಾಟರ್, ವಿಕೆಟ್ ಕೀಪರ್ ಮತ್ತು ನಾಯಕತ್ವದ ಗುಣಗಳನ್ನು ಹೊಂದಿರುವ ಅವರನ್ನು ಡೆಲ್ಲಿ ಉಳಿಸಿಕೊಳ್ಳದಿರುವುದು ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ. ರಿಟೇನ್ ಶುಲ್ಕದ ವಿಚಾರವಾಗಿ ಫ್ರಾಂಚೈಸಿ ಪಂತ್ ಅವರನ್ನು ತಂಡದಿಂದ ಕೈ ಬಿಟ್ಟಿದೆ ಎಂದಿದ್ದಾರೆ. ಖಾಸಗಿ ವಾಹಿನಿಯಲ್ಲಿ ನಡೆದ ಪಾಡ್‌ಕಾಸ್ಟ್‌ನಲ್ಲಿ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಗವಾಸ್ಕರ್ ಅವರ ಈ ಹೇಳಿಕೆಗೆ ಪಂತ್ ಕೂಡಲೇ ಪ್ರತಿಕ್ರಿಯಿಸಿದ್ದಾರೆ.
ಗವಾಸ್ಕರ್ ಹೇಳಿಕೆ:2025ರ ಐಪಿಎಲ್ ಮೆಗಾ ಹರಾಜು ನಡೆಯಲು ಇನ್ನು 5 ದಿನಗಳು ಬಾಕಿ ಇವೆ. ಈ ವೇಳೆ ಗವಾಸ್ಕರ್ ಅವರು ಸ್ಟಾರ್ ಸ್ಪೋರ್ಟ್ಸ್ ಪಾಡ್‌ಕಾಸ್ಟ್‌ನಲ್ಲಿ ರಿಷಭ್ ಪಂತ್ ಅವರನ್ನು ದೆಹಲಿ ತಂಡ ಕೈಬಿಟ್ಟಿರುವ ಬಗ್ಗೆ ಮಾತನಾಡಿದ್ದಾರೆ. "ದೆಹಲಿ ಫ್ರಾಂಚೈಸಿ ಪಂತ್ ಅವರನ್ನು ರಿಟೇನ್ ಮಾಡಿಕೊಳ್ಳಲು ಯೋಚಿಸಿತ್ತು. ಆದರೆ, ರಿಟೇನ್ ಶುಲ್ಕದ ವಿಚಾರದಲ್ಲಿ ಫ್ರಾಂಚೈಸಿ ಮತ್ತು ಪಂತ್ ನಡುವೆ ಹೊಂದಾಣಿಕೆ ಆಗಿಲ್ಲ. ಯಾವುದೇ ಆಟಗಾರನು ಉತ್ತಮ ಫಾರ್ಮ್ನಲ್ಲಿರುವಾಗ ಹೆಚ್ಚಿನ ಶುಲ್ಕವನ್ನು ನಿರೀಕ್ಷಿಸುತ್ತಾನೆ. ಪಂತ್ ಕೂಡ ಕೇಳಿರಬಹುದು".
"ಆದರೆ ಪರ್ಸ್ ಮೌಲ್ಯದ ಮಿತಿಗಳ ಕಾರಣ, ಇಬ್ಬರ ನಡುವಿನ ಹೊಂದಾಣಿಕೆಯಾಗಿಲ್ಲ. ಹೀಗಾಗಿ ಅವರನ್ನು ಬಿಡುಗಡೆ ಮಾಡಿರಬಹುದು. ಆದರೆ ನನ್ನ ಪ್ರಕಾರ ದೆಹಲಿಯು ಪಂತ್ ಅವರನ್ನು ಹರಾಜಿನಲ್ಲಿ ಖರೀದಿಸಲು ಪ್ರಯತ್ನಿಸುತ್ತಿದೆ. ಆದರೇ ದೆಹಲಿ ತಂಡಕ್ಕೆ ಪಂತ್ ಅಗತ್ಯವಿದೆ" ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ.