ಗಾಲೆ(ಶ್ರೀಲಂಕಾ): ನ್ಯೂಜಿಲೆಂಡ್ ವಿರುದ್ಧ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಶ್ರೀಲಂಕಾ ಸರಣಿ ಗೆದ್ದುಕೊಂಡಿದೆ. 15 ವರ್ಷಗಳ ಬಳಿಕ ಲಂಕನ್ನರು ಕಿವೀಸ್ ವಿರುದ್ಧ ಗೆಲುವು ಸಾಧಿಸಿದರು.
ಗಾಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದದಲ್ಲಿ ಸಿಂಹಳೀಯರು ಅದ್ಭುತ ಪ್ರದರ್ಶನ ತೋರಿದರು. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ನಾಯಕ ಧನಂಜಯ ಡಿ ಸಿಲ್ವಾ ಮೊದಲಿಗೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ, ಮೊದಲ ಇನ್ನಿಂಗ್ಸ್‌ನಲ್ಲಿ ಲಂಕಾ ಬ್ಯಾಟರ್‌ಗಳು ಅತ್ಯುತ್ತಮ ಪ್ರದರ್ಶನ ತೋರಿದರು. ದಿನೇಶ್ ಚಂಡಿಮಾಲ್ (116), ಏಂಜೆಲೊ ಮ್ಯಾಥ್ಯೂಸ್ (88) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿದ ಕಮಿಂದು ಮೆಂಡಿಸ್ ಅಜೇಯವಾಗಿ 182 ರನ್ಗಳಿಸಿದರು. ಉಳಿದಂತೆ ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ ಕೂಡ (106) ಶತಕ ಸಿಡಿಸಿದರು. ಇದರಿಂದಾಗಿ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 602 ರನ್ಗಳ ಬೃಹತ್ ಮೊತ್ತ ಪೇರಿಸಿತು.
ಎರಡಂಕಿಗೆ ಕಿವೀಸ್ ಸರ್ವಪತನ:ಇದಕ್ಕುತ್ತರವಾಗಿ ಕಿವೀಸ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 88 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ತಂಡದ ಪರ ಯಾವೊಬ್ಬ ಬ್ಯಾಟರ್ ಅರ್ಧಶತಕ ಗಳಿಸಲು ಸಾಧ್ಯವಾಗದೇ ಪೆವಿಲಿಯನ್ ಸೇರಿದರು.