WPL 2025 RCB: ಮಹಿಳಾ ಪ್ರೀಮಿಯರ್ ಲೀಗ್ನ 3ನೇ ಆವೃತ್ತಿ ಶುಕ್ರವಾರದಿಂದ ಅದ್ಧೂರಿಯಾಗಿ ಆರಂಭವಾಗಿದೆ. ಹಾಲಿ ಚಾಂಪಿಯನ್ ಆಗಿರುವ ಆರ್‌ಸಿಬಿ ಮೊದಲ ಪಂದ್ಯದಲ್ಲಿ ಗುಜರಾತ್ ಅನ್ನು ಎದುರಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ 5 ವಿಕೆಟ್ ನಷ್ಟಕ್ಕೆ 20 ಓವರ್ಗಳಲ್ಲಿ 201 ರನ್ ಚಚ್ಚಿತ್ತು. ಬೃಹತ್ ಗುರಿಯನ್ನು ಬೆನ್ನತ್ತಿದ್ದ ಬೆಂಗಳೂರು ತಂಡ ಆರಂಭಿಕವಾಗಿ ಹಿನ್ನಡೆ ಅನುಭವಿಸಿದರು. ಬಳಿಕ ಪುಟಿದೆದ್ದು ಪಂದ್ಯವನ್ನೇ ಗೆದ್ದುಕೊಂಡಿತು. ರಿಚಾ ಘೋಷ್ (67*) ಮತ್ತು ಎಲ್ಲಿಸಿ ಪೆರ್ರಿ (57) ಸ್ಫೋಟಕ ಬ್ಯಾಟಿಂಗ್ ನೆರವಿನಿಂದಾಗಿ ಇನ್ನು 9 ಎಸೆತಗಳು ಬಾಕಿ ಇರುವಾಗಲೇ ಆರ್‌ಸಿಬಿ ಜಯಭೇರಿ ಬಾರಿಸಿತು. ಇದರೊಂದಿಗೆ ದಾಖಲೆಯನ್ನು ಬರೆಯಿತು.
ಟಿ20 ಕ್ರಿಕೆಟ್ ಇತಿಹಾಸದಲ್ಲೇ ಎರಡನೇ ಬಾರಿಗೆ 200ಕ್ಕೂ ಹೆಚ್ಚಿನ ಗುರಿಯನ್ನು ತಲುಪಿದ ತಂಡವಾಗಿ ಆರ್‌ಸಿಬಿ ದಾಖಲೆ ಬರೆಯಿತು. ಆದರೆ ಮೊದಲ ಪಂದ್ಯ ಗೆದ್ದರೂ ಆರ್ಸಿಬಿಯ ಪ್ರಮುಖ ಬೌಲಿಂಗ್ ಆಲ್ರೌಂಡರ್ ಹೊರಬಿದ್ದಿದ್ದಾರೆ.
ಶ್ರೇಯಾಂಕ ಔಟ್ :ಹೌದು, ಕಳೆದ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಪರ್ಪಲ್ ಕ್ಯಾಪ್ ಗೆದ್ದಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್ 3ನೇ ಆವೃತ್ತಿಯಿಂದ ಹೊರಗುಳಿದಿದ್ದಾರೆ. ಗಾಯಕ್ಕೆ ತುತ್ತಾಗಿರುವ ಕಾರಣ ಹೊರಗುಳಿದಿದ್ದು, ಅವರ ಸ್ಥಾನಕ್ಕೆ ಸ್ಟಾರ್ ಆಲ್ರೌಂಡರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
RCB ಪರ 15 ಪಂದ್ಯಗಳನ್ನು ಆಡಿರುವ ಶ್ರೇಯಾಂಕ 19 ವಿಕೆಟ್‌ಗಳನ್ನು ಕಬಳಿಸಿದ್ದರು. ಕಳೆದ ವರ್ಷ ಆರ್‌ಸಿಬಿ ಐತಿಹಾಸಿಕ ಪ್ರಶಸ್ತಿ ಗೆದ್ದ ಅಭಿಯಾನದಲ್ಲಿ ತಂಡದ ಪ್ರಮುಖ ಆಲ್ರೌಂಡರ್ ಎನಿಸಿಕೊಂಡಿದ್ದರು. ಒಟ್ಟು ಎಂಟು ಪಂದ್ಯಗಳಲ್ಲಿ 12.07 ಸರಾಸರಿಯಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದ್ದರು.
ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್‌ನಲ್ಲಿ 12 ರನ್ಗಳಿಗೆ 4 ವಿಕೆಟ್ ಉರುಳಿಸಿದ್ದು ಅತ್ಯುತ್ತಮ ಪ್ರದರ್ಶನವಾಗಿತ್ತು. ಇದಲ್ಲದೆ ಭಾರತಕ್ಕಾಗಿ ಮೂರು ಏಕದಿನ ಮತ್ತು 16 ಟಿ20 ಪಂದ್ಯಗಳನ್ನು ಸಹ ಆಡಿದ್ದಾರೆ, ಕ್ರಮವಾಗಿ 27.00 ಸರಾಸರಿಯಲ್ಲಿ ಐದು ವಿಕೆಟ್‌ಗಳನ್ನು ಮತ್ತು 19.20 ಸರಾಸರಿಯಲ್ಲಿ 20 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ಇವರ ಅನುಪಸ್ಥಿತಿಯಿಂದ ತಂಡಕ್ಕೆ ಭಾರೀ ಹೊಡೆತ ಬಿದ್ದಿದೆ.
ಸ್ನೇಹ ರಾಣಾ ಇನ್ :ಗಾಯದಿಂದಾಗಿ WPL ನಿಂದ ಹೊರಬಿದ್ದ ಶ್ರೇಯಾಂಕ ಸ್ಥಾನಕ್ಕೆ ಸ್ನೇಹ ರಾಣಾ ಆವರನ್ನು ತಂಡಕ್ಕೆ ಬದಲಿ ಆಟಗಾರ್ತಿಯಾಗಿ ಸೇರಿಸಿಕೊಳ್ಳಲಾಗಿದೆ. ಕಳೆದ ವರ್ಷ ನಡೆದ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದ ಸ್ನೇಹ ರಾಣಾ ಅವರನ್ನು 30 ಲಕ್ಷಕ್ಕೆ ಆರ್‌ಸಿಬಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಫ್ರಾಂಚೈಸಿ ತಿಳಿಸಿದೆ. ಆಲ್‌ರೌಂಡರ್ ಆಗಿರುವ ರಾಣಾ, ಈ ಹಿಂದೆ ಗುಜರಾತ್ ಜೈಂಟ್ಸ್ ಪರ ಆಡಿದ್ದಾರೆ.
ರಾಣಾ ದಾಖಲೆ : 2014ರಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಸ್ನೇಹ ಎಲ್ಲಾ ಸ್ವರೂಪಗಳಲ್ಲಿ ಭಾರತ ಪ್ರತಿನಿಧಿಸಿದ್ದಾರೆ. ನಾಲ್ಕು ಟೆಸ್ಟ್‌ಗಳು, 27 ಏಕದಿನ ಮತ್ತು 25 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಕ್ರಮವಾಗಿ 20.95 ಸರಾಸರಿಯಲ್ಲಿ 23 ವಿಕೆಟ್‌ಗಳು, 34.44 ಸರಾಸರಿಯಲ್ಲಿ 29 ವಿಕೆಟ್‌ಗಳು ಮತ್ತು 21.75 ಸರಾಸರಿಯಲ್ಲಿ 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. WPL ನಲ್ಲಿ 11 ಪಂದ್ಯಗಳನ್ನು ಆಡಿ 6 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:2017ರ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು 8 ವರ್ಷ ಏಕೆ ನಿಲ್ಲಿಸಲಾಗಿತ್ತು?