ನವದೆಹಲಿ: ಪ್ಯಾರಿಸ್ ಒಲಿಂಪಿಕ್ನ ಎರಡನೇ ದಿನ ಟೇಬಲ್ ಟೆನಿಸ್ ಪಂದ್ಯದಲ್ಲಿ ಭಾರತಕ್ಕೆ ಹಿನ್ನಡೆಯಾಗಿದೆ. ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಸ್ಟಾರ್ ಪ್ಯಾಡ್ಲರ್ ಶರತ್ ಕಮಲ್ ಅವರು ಸ್ಲೊವೇನಿಯಾದ ಕೋಜುಲ್ ಡೆನಿ ವಿರುದ್ಧ ಸೋಲನುಭವಿಸಿದ್ದಾರೆ. 49 ನಿಮಿಷಗಳ ಪಂದ್ಯದಲ್ಲಿ ಕೋಜುಲ್ ಡೆನಿ, 4-2 ಅಂತರದಿಂದ ಭಾರತದ ಶರತ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಸೋಲಿನೊಂದಿಗೆ ಶರತ್ ಕಮಲ್ ಅವರ ಪ್ಯಾರಿಸ್ ಒಲಿಂಪಿಕ್ ಪಯಣ ಅಂತ್ಯಗೊಂಡಿದೆ.
ಪಂದ್ಯದ ಆರಂಭದ ಮೊದಲ ಸೆಟ್ನಲ್ಲಿ ಗೆಲುವು ಸಾಧಿಸಿದ್ದ ಶರತ್ ಸತತ ಮೂರು ಸೆಟ್ಗಳಲ್ಲಿ ಹಿನ್ನಡೆ ಅನುಭವಿಸಿದರು. ಮೊದಲ ಸೆಟ್ನಲ್ಲಿ ಶರತ್ 12-10ರಿಂದ ಗೆಲುವು ಸಾಧಿಸಿದ್ದರು. ಆ ಬಳಿಕ ಸತತ ಮೂರು ಸೆಟ್ಗಳನ್ನು ಕಳೆದುಕೊಂಡರು.
ಎರಡನೇ ಸೆಟ್ನಲ್ಲಿ, ಎದುರಾಳಿ ಆಟಗಾರ ಸ್ಲೊವೇನಿಯಾದ ಕೊಜುಲ್ ಡೆನಿ 11-9 ರಿಂದ ಗೆಲುವು ಸಾಧಿಸಿದರು, ಇದಕ್ಕಾಗಿ ಅವರು ಕೇವಲ 8 ನಿಮಿಷಗಳನ್ನು ತೆಗೆದುಕೊಂಡರು. ಆ ಬಳಿಕ ಮೂರನೇ ಸೆಟ್ನಲ್ಲಿ 11-6, ನಾಲ್ಕನೇ ಸುತ್ತಿನಲ್ಲಿ 11-7 ಕ್ರಮವಾಗಿ ಗೆಲುವು ಸಾಧಿಸಿದರು.