KL Rahul: ಚಾಂಪಿಯನ್ಸ್ ಟ್ರೋಫಿ ಭಾಗವಾಗಿ ಬುಧವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿರುವುದು ಗೊತ್ತೇ ಇದೆ. ಆದರೆ ಈ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಮಾಡಿರುವ ತ್ಯಾಗಕ್ಕೆ ಅಭಿಮಾನಿಗಳು ಶಹಬ್ಬಾಸ್ ಹೇಳಿದ್ದಾರೆ.
ಹೌದು, ಬಾಂಗ್ಲಾ ನೀಡಿದ್ದ 228 ರನ್ಗಳ ಗುರಿ ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆದಿದ್ದರೂ ಬಳಿಕ ರೋಹಿತ್ ಶರ್ಮಾ (41), ವಿರಾಟ್ ಕೊಹ್ಲಿ (22), ಶ್ರೇಯಸ್ ಅಯ್ಯರ್ (15), ಅಕ್ಷರ್ ಪಟೇಲ್ (8) ವಿಕೆಟ್ ಬೀಳುತ್ತಿದ್ದಂತೆ ಒತ್ತಡ ಹೆಚ್ಚಾಗತೊಡಗಿತು. ಆದರೆ ಆರಂಭಿಕರಾಗಿ ಬ್ಯಾಟಿಂಗ್ಗೆ ಬಂದಿದ್ದ ಶುಭಮನ್ ಗಿಲ್ (101*) ಮತ್ತು ಕೆ.ಎಲ್.ರಾಹುಲ್ (41*) ಸಮಯೋಚಿತ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ರಾಹುಲ್ಗೆ ಅರ್ಧಶತಕ ಮಾಡಿಕೊಳ್ಳುವ ಅವಕಾಶವಿದ್ದರೂ ಶುಭಮನ್ ಗಿಲ್ ಶತಕಕ್ಕಾಗಿ ತ್ಯಾಗ ಮಾಡಿದರು.
Thank you KL Rahul for not getting out and not letting Hardik Pandya bat 🙇♂️ pic.twitter.com/G6TdDhccJt
— Dinda Academy (@academy_dinda) February 20, 2025
ಗಿಲ್ 88ರನ್ ಗಳಿಸಿದ್ದಾಗ ರಾಹುಲ್ 33 ರನ್ ಸಿಡಿಸಿದ್ದರು. ಈ ವೇಳೆ ತಂಡದ ಗೆಲುವಿಗೆ 19 ರನ್ ಬೇಕಿದ್ದವು. ಆದರೆ ರಾಹುಲ್ ತಮ್ಮ ಬ್ಯಾಟಿಂಗ್ ವೇಗ ಕಡಿಮೆ ಮಾಡಿಕೊಂಡರು. ಗಿಲ್ ಬ್ಯಾಟಿಂಗ್ ವೇಗ ಹೆಚ್ಚಿಸಿಕೊಂಡು ಶತಕ ಬಾರಿಸಿದರು. ಇದರ ಬೆನ್ನಲ್ಲೇ ರಾಹುಲ್ ಕುರಿತು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಹಾರ್ದಿಕ್ ಟ್ರೋಲ್: ನಿನ್ನೆಯ ಪಂದ್ಯದಲ್ಲಿ ರಾಹುಲ್ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಇದ್ದಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಈ ಪಂದ್ಯದಲ್ಲಿ ರಾಹುಲ್ ಔಟಾಗಿ ಹಾರ್ದಿಕ್ ಬ್ಯಾಟಿಂಗ್ ಮಾಡಲು ಬಂದಿದ್ದರೆ ಗಿಲ್ಗೆ ಶತಕ ಮಾಡಲು ಬಿಡುತ್ತಿರಲಿಲ್ಲ ಎಂದು ಕಾಲೆಳೆದಿದ್ದಾರೆ. ಹೀಗೆ ಫ್ಯಾನ್ಸ್ ಟ್ರೋಲ್ ಮಾಡುತ್ತಿರುವುದರ ಹಿಂದೆ ಕಾರಣವೂ ಇದೆ.
ಎರಡು ವರ್ಷಗಳ ಹಿಂದೆ, 2023ರಲ್ಲಿ ಆಗಸ್ಟ್ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ನಡುವೆ ಟಿ20 ಪಂದ್ಯ ನಡೆದಿತ್ತು. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 159 ರನ್ ಗಳಿಸಿತ್ತು. ಬಳಿಕ ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಕೇವಲ 17.5 ಓವರ್‌ಗಳಲ್ಲಿ ಗುರಿ ತಲುಪಿ ಗೆಲುವು ಸಾಧಿಸಿತ್ತು.
Achha hua KL tha. Agar Hardik Pandya hota toh… https://t.co/UBNtYrN6QB
— Nihari Korma (@NihariVsKorma) February 21, 2025
ಪಂದ್ಯದಲ್ಲಿ ತಿಲಕ್ ವರ್ಮಾ (49*) ಮತ್ತು ಹಾರ್ದಿಕ್ ಪಾಂಡ್ಯ (20*) ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಆದರೆ ತಿಲಕ್ ವರ್ಮಾ ಅರ್ಧಶತಕ ಪೂರ್ಣಗೊಳಿಸಲು ಒಂದು ರನ್ ಬೇಕಿತ್ತು. ಗೆಲುವಿಗೆ 2.1 ಓವರ್ನಲ್ಲಿ 2 ರನ್ ಬೇಕಿತ್ತು. ಈ ವೇಳೆ ಪಾಂಡ್ಯ ಸಿಕ್ಸರ್ ಸಿಡಿಸಿ ಪಂದ್ಯ ಮುಗಿಸಿದ್ದರು. ತಿಲಕ್ ವರ್ಮಾ ಅರ್ಧಶತಕದ ಹೊಸ್ತಿಲಲ್ಲಿರುವಾಗಲೇ ಹಾರ್ದಿಕ್ ಸಿಕ್ಸರ್ ಬಾರಿಸಿ ಪಂದ್ಯ ಮುಗಿಸಿದ್ದು ಸರಿಯಲ್ಲ ಎಂಬ ಟೀಕೆಗಳು ಕೇಳಿಬಂದಿದ್ದವು.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ: ಗಿಲ್ ಶತಕ, ಶಮಿಗೆ 5 ವಿಕೆಟ್ ಗೊಂಚಲು; ಬಾಂಗ್ಲಾ ಮಣಿಸಿ ಭಾರತ ಶುಭಾರಂಭ