ನವದೆಹಲಿ:ದಕ್ಷಿಣ ಆಫ್ರಿಕಾದ ಮಾಜಿ ವೇಗಿ, ಮುಂಬೈ ಇಂಡಿಯನ್ಸ್ ಆಟಗಾರ್ತಿ ಶಬ್ನಿಮ್ ಇಸ್ಮಾಯಿಲ್ ಅವರು ಮಹಿಳಾ ಕ್ರಿಕೆಟ್ನಲ್ಲಿಯೇ 'ಅತಿ ವೇಗದ ಎಸೆತ'ದಿಂದ ಇತಿಹಾಸ ನಿರ್ಮಿಸಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ (ಡಬ್ಲ್ಯೂಪಿಎಲ್) ಮಂಗಳವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 132.1 ಕಿ.ಮೀ ವೇಗದಲ್ಲಿ ಶಬ್ನಿಮ್ ಬೌಲಿಂಗ್ ಮಾಡಿದರು.
'ಲೇಡಿ ಡೇಲ್ ಸ್ಟೇಯ್ನ್' ಎಂದೇ ಕರೆಯಲ್ಪಡುವ ಶಬ್ನಿಮ್, ಅತಿ ವೇಗದ ಬೌಲಿಂಗ್ ಮಾಡುವ ಮೂಲಕ ತಮ್ಮದೇ ಹೆಸರಿನಲ್ಲಿರುವ ದಾಖಲೆಯನ್ನು ಮುರಿದರು. ಇದರ ಜೊತೆಗೆ ಮಹಿಳಾ ಕ್ರಿಕೆಟ್‌ನಲ್ಲಿ ಪ್ರಪ್ರಥಮ ಬಾರಿಗೆ ಗಂಟೆಗೆ 130 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆಸಿಕೊಂಡರು.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಶಬ್ನಿಮ್ ಅವರು ಡೆಲ್ಲಿ ತಂಡದ ನಾಯಕಿ ಮೆಗ್ ಲ್ಯಾನಿಂಗ್ಗೆ ಬೌಲ್ ಮಾಡುತ್ತಿದ್ದಾಗ ಈ ದಾಖಲೆ ನಿರ್ಮಾಣವಾಯಿತು. ಮೂರನೇ ಓವರ್ನ ಎರಡನೇ ಎಸೆತವು ಮಿಂಚಿನ ವೇಗದಲ್ಲಿ ಬಂದ ಚೆಂಡು ಮೆಗ್ ಅವರ ಪ್ಯಾಡ್ಗೆ ಅಪ್ಪಳಿಸಿತು. ಆಗ ವೇಗದ ಲೆಕ್ಕಾಚಾರ ಹಾಕುವ ದೊಡ್ಡ ಪರದೆಯಲ್ಲಿ ಗಂಟೆಗೆ 132.1 ಕಿ.ಮೀ ವೇಗವೆಂದು ಬರೆದು ವಿಶ್ವದಾಖಲೆಯ ಎಸೆತ ಎಂದು ದೊಡ್ಡದಾಗಿ ತೋರಿಸಲಾಯಿತು.