ಬೆಂಗಳೂರು: ನಗರದಲ್ಲಿ ಹೊಸ ಅಮೆರಿಕ ಕಾನ್ಸುಲೇಟ್ ಕಚೇರಿಯನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗ್ಯಾರ್‌ಸೆಟಿ ಇಂದು ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಇದು ಭಾರತದ ಐದನೇ ಅಮೆರಿಕ ಕಾನ್ಸುಲೇಟ್ ಕಚೇರಿಯಾಗಿದೆ.
ಈ ಕುರಿತು ಭಾರತದಲ್ಲಿನ ಯುಎಸ್ ರಾಯಭಾರ ಕಚೇರಿ ಪತ್ರಿಕಾ ಪ್ರಕಟಣೆ ಹೊರಡಿಸಿ, "ಆರ್ಥಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ನಮ್ಮ ರಾಜತಾಂತ್ರಿಕ ಸಂಬಂಧ ಹೆಚ್ಚಿಸುವ ಮೂಲಕ, ಹೂಡಿಕೆ ಮತ್ತು ವ್ಯಾಪಾರದ ಅಭಿವೃದ್ಧಿಶೀಲ ಪರಿಸರ ವ್ಯವಸ್ಥೆ ಬಲಪಡಿಸುವುದಕ್ಕೆ ಬೆಂಗಳೂರಿನ ಅಮೆರಿಕ ಕಾನ್ಸುಲೇಟ್ ಉತ್ತೇಜನ ನೀಡುತ್ತದೆ. ಇದರ ಜೊತೆಗೆ ಚೆನ್ನೈ ಮತ್ತು ಭಾರತದ ಇತರ ಅಮೆರಿಕ ಕಾನ್ಸುಲೇಟ್ಗಳ ಸೇವೆಗಳನ್ನು ಮುಂದುವರಿಸಲಾಗುತ್ತದೆ" ಎಂದು ಹೇಳಿದೆ.
"ಬೆಂಗಳೂರಿನಲ್ಲಿ ಅಮೆರಿಕ ಕಚೇರಿ ಯುನೈಟೆಡ್ ಸ್ಟೇಟ್ಸ್ ಮತ್ತು ಕರ್ನಾಟಕ ರಾಜ್ಯದ ನಡುವಿನ ದೀರ್ಘಕಾಲೀನ ಸಂಬಂಧಗಳನ್ನು ಬಲಪಡಿಸುತ್ತದೆ. ಕರ್ನಾಟಕದಲ್ಲಿ ದೀರ್ಘಕಾಲೀನ ರಾಜತಾಂತ್ರಿಕ ವಿಷಯಗಳ ಬಗ್ಗೆ ಚರ್ಚೆಸಲು ಮತ್ತು ಇತರ ಕಾರ್ಯತಂತ್ರದ ಪಾಲುದಾರಿಕೆಗೆ ನೆರವಾಗುತ್ತದೆ. ರಾಜ್ಯವು ಸುಮಾರು 700 ಯುಎಸ್ ಕಂಪನಿಗಳು ಇವೆ. ಅಮೆರಿಕದ ಪ್ರವಾಸಿಗರು, ಅಧ್ಯಯನ ನಡೆಸಲು ಬಂದಿರುವವರಿಗೆ ಮತ್ತು ಕೆಲಸ ನಿರ್ವಹಿಸಲು ಬಂದಿರುವ ಸಾವಿರಾರು ಯುಎಸ್ ನಾಗರಿಕರಿಗೆ ಕರ್ನಾಟಕ ನೆಲೆಯಾಗಿದೆ. ಇದು ಯುಎಸ್ ಮತ್ತು ಭಾರತ ಎರಡರಲ್ಲೂ ಉದ್ಯೋಗಗಳನ್ನು ಸೃಷ್ಟಿಸುತ್ತದೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದು ಬಾಹ್ಯಾಕಾಶ ವಿಷಯದಲ್ಲಿ ಸಹಯೋಗದ ಕೇಂದ್ರವಾಗಿದೆ. ಈ ವರ್ಷ ನಾಸಾ - ಇಸ್ರೋ ಜಂಟಿಯಾಗಿ ಅಭಿವೃದ್ಧಿಪಡಿಸಿದ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಗ್ರಹದ ಉಡಾವಣೆ ಮತ್ತು ನಾಸಾದಲ್ಲಿ ತರಬೇತಿ ಪಡೆದ ಭಾರತೀಯ ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯುವ ಯೋಜನೆ ಇದೆ.
ಯುಎಸ್ ರಾಯಭಾರಿ ಎರಿಕ್ ಗ್ಯಾರ್‌ಸೆಟಿ ಮಾತನಾಡಿ,"ನಮ್ಮ ಸಂಬಂಧವು ಸಮುದ್ರತಳದಿಂದ ನಕ್ಷತ್ರಗಳವರೆಗೆ ವಿಸ್ತರಿಸಿದೆ. ಈ ರಾಜ್ಯದ ನಾವೀನ್ಯತೆ ಮತ್ತು ಉದ್ಯಮಶೀಲತೆ, ಸೆಮಿ ಕಂಡಕ್ಟರ್‌ಗಳಿಂದ ಬಾಹ್ಯಾಕಾಶದವರೆಗೆ ಅಭಿವೃದ್ಧಿ ಹೊಂದಿ ನನ್ನ ತವರು ರಾಜ್ಯ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಗೆ ಸರಿಸಾಟಿಯಾಗಿದೆ. ನಮ್ಮ ಹೊಸ ಕಾನ್ಸುಲೇಟ್ ಸೈಟ್ ಅನ್ನು ಉದ್ಘಾಟಿಸಲು ಮತ್ತು ಅಮೆರಿಕ ಮತ್ತು ಕರ್ನಾಟಕದ ನಾಗರಿಕರ ನಡುವಿನ ಸಹಯೋಗವನ್ನು ಘೋಷಿಸಲು ನಾನು ತುಂಬಾ ಹೆಮ್ಮೆಪಡುತ್ತೇನೆ" ಎಂದು ಹೇಳಿದ್ದಾರೆ.
ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮಾತನಾಡಿ, "ನಾನು ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ನ ಉತ್ತಮ ಭವಿಷ್ಯವನ್ನು ನೋಡುತ್ತಿದ್ದೇನೆ. ಆ ಭವಿಷ್ಯದಲ್ಲಿ, ನಿಸ್ಸಂಶಯವಾಗಿ ಬೆಂಗಳೂರು ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.
ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ,"ಇದು ಕೇವಲ ರಾಜತಾಂತ್ರಿಕ ಕಾರ್ಯಾಚರಣೆಯ ಪ್ರಾರಂಭವಲ್ಲ, ಆದರೆ ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತ ನಡುವಿನ ಸಂಬಂಧದ ಪ್ರಬಲ ಸಂಕೇತವಾಗಿದೆ. ವಿಶೇಷವಾಗಿ ಕರ್ನಾಟಕದೊಂದಿಗೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ ಉದ್ಘಾಟಿಸಿದ ಪ್ರಧಾನಿ ಮೋದಿ
ಇದನ್ನೂ ಓದಿ: ಇಂದಿನಿಂದ ಇಂಡಿಯಾ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ: ಪ್ರಧಾನಿ ಮೋದಿಯಿಂದ ಉದ್ಘಾಟನೆ - ಹೆಚ್ಡಿಕೆ