ಮೈಸೂರು: ನಮ್ಮ ಸರ್ಕಾರ ಬಿದ್ದು ಹೋಗಲ್ಲ. ಆದರೆ, ಯಾರು ಮುಖ್ಯಮಂತ್ರಿಯಾಗಿರುತ್ತಾರೋ ಗೊತ್ತಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಇದ್ದೇ ಇರುತ್ತದೆ ಎಂದು ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಹೇಳಿಕೆ ನೀಡಿದ್ದಾರೆ.
ಇಂದು ಕಾಂಗ್ರೆಸ್ ಭವನದಲ್ಲಿ ಮಾದ್ಯಮಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿ ಸಮಾವೇಶ, ಮೋಹನ್ ಭಾಗವತ್ ಹೇಳಿಕೆ, ಜಾತಿಗಣತಿ ವರದಿ, ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಹೇಳಿಕೆಯ ಬಗ್ಗೆ ಮಾತನಾಡಿದರು.
ಜೈ ಬಾಪು, ಜೈ ಭೀಮ್, ಜೈ ಸಂವಿಧಾನ: ಇದೇ 21ರಂದು ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶ ನಡೆಯಲಿದೆ. ಅಲ್ಲಿ ಸುವರ್ಣಸೌಧದ ಮುಂಭಾಗ ಮಹಾತ್ಮ ಗಾಂಧಿ ಪುತ್ಥಳಿ ಅನಾವರಣವಾಗಲಿದೆ. ಕಳೆದ ಡಿಸೆಂಬರ್ನಲ್ಲಿ ನಡೆಯಬೇಕಿದ್ದ ಸಮಾವೇಶ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದಿಂದ ಮುಂದೂಡಲಾಗಿತ್ತು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿ ಕಾಂಗ್ರೆಸ್ ಅಧಿವೇಶನ ನಡೆಸಿದ್ದರು. ಅದರ ಶತಮಾನೋತ್ಸವದ ಹಿನ್ನೆಲೆ ಈ ಕಾರ್ಯಕ್ರಮ ನಡೆಯುತ್ತಿದೆ.
ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ ಎಂಬ ಸ್ಲೋಗನ್ ಮೂಲಕ ದೇಶದಲ್ಲಿ ಸಮಾನತೆ, ಸಾಮರಸ್ಯ ಸಾರುವ ನಿಟ್ಟಿನಲ್ಲಿ ಈ ಒಂದು ಕಾರ್ಯಕ್ರಮ ಜರುಗಲಿದೆ. ಮಹಾತ್ಮ ಗಾಂಧಿ ಅವರ ವಿಚಾರಧಾರೆ, ಮತ್ತೊಂದು ಕಡೆ ಮಹಾತ್ಮ ಗಾಂಧಿ ಹತ್ಯೆ ಮಾಡಿದ ನಾತುರಾಂ ಗೋಡ್ಸೆ ವಿಚಾರಧಾರೆ ಚರ್ಚೆಗೆ ಬರಲಿದೆ. ಭಾರತದ ಅಭಿವೃದ್ಧಿಗೆ ಸಂವಿಧಾನದ ಮೂಲಕ ಚರ್ಚಿಸಲು ಈ ಸಮಾವೇಶ ನಡೆಯುತ್ತಿದೆ.
ಮೋಹನ್ ಭಾಗವತ್ ಮೇಲೆ ಕೇಸ್ ದಾಖಲಿಸಿ: ಆರ್ಎಸ್ಎಸ್ನ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 1947 ರಲ್ಲಿ ಅಲ್ಲ, ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ ಬಳಿಕ ಬಂದಿದೆ ಎನ್ನುತ್ತಾರೆ. ಇವರ ಮನಸ್ಥಿತಿ ಹೇಗಿದೆ ನೋಡಿ. ಈ ದೇಶದ ಸಂವಿಧಾನವನ್ನು ಗೌರವಿಸಬೇಕು, ದೇಶದ ಇತಿಹಾಸ ಪರಂಪರೆ ಗೌರವಿಸಬೇಕು ಎಂದು ಸಂವಿಧಾನ ಹೇಳುತ್ತದೆ. ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್. ಹಲವು ಜೀವಗಳ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ನೀವು ಸಂವಿಧಾನ ಬದ್ಧತೆ ಮೆರೆಯುತ್ತಿದ್ದರೆ ತಕ್ಷಣವೇ ಮೋಹನ್ ಭಾಗವತ್ ಮೇಲೆ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಮೋದಿ, ಅಮಿತ್ ಶಾ ಬಾಯಿ ಬಿಚ್ಚಿಲ್ಲ: ಇಂದು ಒಂದು ಡಾಲರ್ ಮೌಲ್ಯ 86 ರೂ.ಗೆ ಏರಿದೆ. ಇದರ ಬಗ್ಗೆ ಮೋದಿ, ಅಮಿತ್ ಶಾ ಯಾಕೆ ಏನು ಮಾತನಾಡುವುದಿಲ್ಲ. ಕಳೆದ 10 ವರ್ಷದಿಂದ ಸುಮಾರು 132 ಲಕ್ಷ ಕೋಟಿ ಸಾಲ ಮಾಡಿದ್ದಾರೆ. 1947 ರಿಂದ 2014 ರವರೆಗೂ ಮಾಡದ ಸಾಲವನ್ನು, ಕೇವಲ ಹತ್ತು ವರ್ಷಗಳಲ್ಲಿ ಕೇಂದ್ರ ಮಾಡಿದೆ. ದೇಶದಲ್ಲಿ ಸಂವಿಧಾನ ಉಳಿಸಲು, ಗಾಂಧೀಜಿಯ ವಿಚಾರಧಾರೆಗಳನ್ನು ಉಳಿಸಲಿಕ್ಕೆ ಈ ಸಮಾವೇಶ ನಡೆಯುತ್ತಿದೆ. ಇದರಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ರಾಹುಲ್ ಗಾಂಧಿ ಹೇಳಿಕೆ ಕೊಟ್ಟಾಗ ಅದಕ್ಕೆ ಅಪಾರ್ಥ ಕಲ್ಪಿಸಿ ಅವರ ಮೇಲೆ ದೂರು ಕೊಟ್ಟು ಕೇಸ್ ಹಾಕುವ ಕೆಲಸ ಬಿಜೆಪಿಯಿಂದ ನಡೆಯುತ್ತದೆ. ಆದರೆ ಮಿಸ್ಟರ್ ಮೋದಿ, ಮಿಸ್ಟರ್ ಅಮಿತ್ ಶಾ, ನೀವು ಸಂವಿಧಾನದಡಿ ಪ್ರಧಾನಿ ಆಗಿರೋದು ಸಚಿವರಾಗಿರೋದು. ಮೋಹನ್ ಭಾಗವತ್ ಹೇಳಿಕೆಯಿಂದ ಸಂವಿಧಾನ ಮೇಲೆ ನಿಮಗೆ ಎಷ್ಟು ಗೌರವವಿದೆ ಎಂದು ಗೊತ್ತಾಗುತ್ತದೆ. ನೀವು ನಿಜವಾಗಿಯೂ ಸಂವಿಧಾನ ಪಾಲಕರಾಗಿದ್ದರೆ ಮೋಹನ್ ಭಾಗವತ್ ಮೇಲೆ ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.
ಸ್ವಾತಂತ್ರ್ಯ ಚಳವಳಿಯಲ್ಲಿ ಆರ್ಎಸ್ಎಸ್ ಪಾತ್ರ ಏನು?: ತ್ಯಾಗ ಬಲಿದಾನದ ಮೂಲಕ ಬಂದಿರುವ ಸ್ವಾತಂತ್ರ್ಯವನ್ನು ಅಣಕು ಮಾಡಿತ್ತೀರಲ್ಲ, ನಿಮಗೆ ಬುದ್ಧಿಭ್ರಮಣೆ ಆಗಿದೆಯಾ? ಆರ್ಎಸ್ಎಸ್ನವರು ಸಂವಿಧಾನ, ಸ್ವಾತಂತ್ರ್ಯ ವಿರೋದಿಸುತ್ತೀರಲ್ಲ. ಕೇಂದ್ರ ಸರ್ಕಾರ ಸುಮೊಟೊ ಕೇಸನ್ನು ಮೋಹಮ್ ಭಾಗವತ್ ಮೇಲೆ ಹಾಕಬೇಕು. ಈ ದೇಶದ ಸ್ವತ್ತನ್ನು ಅಂಬಾನಿ ಅದಾನಿಯವರಿಗೆ ವಹಿಸಲು ಹೊರಟದ್ದೀರಿ. ಈ ದೇಶದ ಇತಿಹಾಸ, ಸ್ವಾತಂತ್ರ್ಯ ಚಳುವಳಿಯಲ್ಲಿ ಇತಿಹಾಸವನ್ನು ತಿರುಚುವಂಥ ಕೆಲಸವನ್ನು ಆರ್ಎಸ್ಎಸ್ ಹಾಗೂ ಬಿಜೆಪಿ ಮಾಡುತ್ತಿದೆ. ಇದನ್ನು ಜನರಿಗೆ ತಿಳಿಸುವ ಕೆಲಸವನ್ನು ನಾವು ಮಾಡುತ್ತೇವೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಕಾಂಗ್ರೆಸ್ನವರು, ಈ ದೇಶದ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್ನವರು ಎಂದರು.
ಸರ್ಕಾರ ಬಿದ್ದೋಗಲ್ಲ: ವಿತೌಟ್ ಯಡಿಯೂರಪ್ಪ ನಾಟ್ ಅಟ್ ಆಲ್ ವಿಜಯೇಂದ್ರ. ಬಿಜೆಪಿಯೇ ಒಂದು ಮನೆ ಮೂರು ಬಾಗಿಲು ಎಂಬಂತಾಗಿದೆ. ಅದನ್ನು ಬಿಟ್ಟು ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ನಮ್ಮ ಪಕ್ಷ 138 ಸ್ಥಾನಗಳೊಂದಿಗೆ 5 ವರ್ಷಗಳ ಕಾಲ ಭದ್ರವಾಗಿರುತ್ತದೆ. ಬೇರೆ ಯಾರೋ ಹೇಳಿದ್ರು ಅಂತ ನಮ್ಮ ಸರ್ಕಾರ ಬಿದ್ದೋಗಲ್ಲ. ಯಾರು ಮುಖ್ಯಮಂತ್ರಿ ಇರ್ತಾರೆ ಬಿಡ್ತಾರೋ ಗೊತ್ತಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಇದ್ದೇ ಇರುತ್ತದೆ. ಯಾರು ಸಿಎಂ ಆಗಬೇಕು ಆಗಬಾರದು ಅಂತ ನಾನು ಬೆಂಕಿ ಹಚ್ಚುವ ಕೆಲಸ ಮಾಡಲ್ಲ ಎಂದು ಹೇಳಿದರು.
ಜನಗಣತಿಯೊಂದಿಗೆ ಜಾತಿಗಣತಿ ಮಾಡಬೇಕು: ರಾಷ್ಟ್ರಮಟ್ಟದಲ್ಲಿ ಜಾತಿಗಣತಿ ಕೇಂದ್ರ ಸರ್ಕಾರ ಮಾಡಬೇಕು. ಜನಗಣತಿಯೊಂದಿಗೆ ಜಾತಿಗಣತಿಯನ್ನು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕು. ಜಾತಿಗಣತಿಯನ್ನು ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡುತ್ತದೆ. ಈಗಾಗಲೇ ನಾಗಮೋಹನ್ ದಾಸ್ ಕಮಿಟಿ ಮೂಲಕ ಡಾಟ ಸಂಗ್ರಹ ಮಾಡಲಾಗಿದ್ದು, ಮುಂದಿನ ದಿನಗಳ ಜಾತಿ ಸಮೀಕ್ಷೆ ವರದಿ ಬಿಡುಗಡೆ ಮಾಡಲಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಲ್ಲ, ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಬಹುದು: ಬಿ.ವೈ.ವಿಜಯೇಂದ್ರ