ನವದೆಹಲಿ:ತಮ್ಮ ವಯಸ್ಸಿನ ಕುರಿತು ತಪ್ಪು ಮಾಹಿತಿ ನೀಡಿದ ಆರೋಪ ಎದುರಿಸುತ್ತಿರುವ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್, ಮತ್ತವರ ಕುಟುಂಬದ ಸದಸ್ಯರು ಹಾಗೂ ತರಬೇತುದಾರ ಯು. ವಿಮಲ್ಕುಮಾರ್ ವಿರುದ್ಧ ಬಲವಂತದ ಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಕೆ.ವಿನೋದ್ ಚಂದ್ರನ್ ಅವರಿದ್ದ ಪೀಠ, ಲಕ್ಷ್ಯ ಸೇನ್ ಮತ್ತು ಅವರ ಸಹೋದರ ಚಿರಾಗ್ ಸೇನ್ ಅವರ ವಿರುದ್ಧ ಕರ್ನಾಟಕ ಪೊಲೀಸರು ತಕ್ಷಣದ ಕ್ರಮ ಕೈಗೊಳ್ಳದಂತೆ ನಿರ್ಬಂಧಿಸಿತು.
ವಯಸ್ಸಿನ ಕುರಿತು ಸೇನ್ ಸಹೋದರರು ನಕಲಿ ಜನನ ಪ್ರಮಾಣಪತ್ರ ನೀಡಿದ್ದರ ವಿರುದ್ಧ ದಾಖಲಾದ ದೂರಿಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ, ಬ್ಯಾಡ್ಮಿಂಟನ್ ಆಟಗಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಮಂಗಳವಾರ ಇದರ ವಿಚಾರಣೆ ನಡೆಸಿದ ಕೋರ್ಟ್ ತಡೆಯಾಜ್ಞೆ ನೀಡಿತು. ಜತೆಗೆ ಕರ್ನಾಟಕ ಸರ್ಕಾರ ಮತ್ತು ದೂರುದಾರ ಎಂ.ಜಿ.ನಾಗರಾಜ್‌ಗೆ ನೋಟಿಸ್ ಜಾರಿ ಮಾಡಿತು.
ಆರೋಪವೇನು?:ದೂರುದಾರ ಎಂ.ಜಿ.ನಾಗರಾಜ್ ಎಂಬವರು ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಮಾಹಿತಿ ಹಕ್ಕು ಕಾಯಿದೆಯಡಿ ದಾಖಲೆಗಳನ್ನು ಪಡೆದುಕೊಂಡಿದ್ದು, ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರು ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳಲು ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಮಾಹಿತಿಯುಳ್ಳ ದಾಖಲೆಗಳನ್ನು ನೀಡಿದ್ದಾರೆ. ಇದರಲ್ಲಿ ಅವರ ಕುಟುಂಬ ಮತ್ತು ತರಬೇತುದಾರರು ಭಾಗಿಯಾಗಿದ್ದಾರೆ ಎಂದು ಖಾಸಗಿ ದೂರು ದಾಖಲಿಸಿದ್ದರು.