ಹೈದರಾಬಾದ್ :ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಮಹಿಳಾ ವಿರೋಧಿ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಟೀಕೆಗೆ ಗುರಿಯಾಗಿದೆ. ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕಾಂಗ್ರೆಸ್ ನಾಯಕ ಹೇಳಿಕೆ ಖಂಡಿಸಿದ್ದು, ನಾನು ಹೆಣ್ಣು, ಹೋರಾಟ ಮಾಡಬಲ್ಲೆ (ಲಡ್ಕಿ ಹು ಲಡ್ ಸಕ್ತಿ ಹು) ಎನ್ನುವ ಪಕ್ಷದಿಂದ ಇಂಥದ್ದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಒಲಿಂಪಿಕ್ಸ್ ಪದಕ ವಿಜೇತೆ, ಕರ್ನಾಟಕದ ಕಾಂಗ್ರೆಸ್ನ ನಾಯಕ ಶಾಮನೂರು ಶಿವಶಂಕರಪ್ಪ ಅವರು ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಿರಬೇಕು ಎಂದು ಹೇಳಿಕೆ ನೀಡಿದ್ದಾರೆ. ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಕುರಿತಾದ ಈ ಹೇಳಿಕೆಯು ಅಚ್ಚರಿ ಮೂಡಿಸಿದೆ. ಈ ಹಿಂದೆ ಇದೇ ಪಕ್ಷ "ನಾನು ಹೆಣ್ಣಾದರೂ, ಹೋರಾಟ ಮಾಡಬಲ್ಲೆ" ಎನ್ನುವ ಘೋಷವಾಕ್ಯ ಮೊಳಗಿಸಿತ್ತು. ಅಂತಹ ಪಕ್ಷದ ನಾಯಕರು ಸ್ತ್ರೀವಿರೋಧಿ ವ್ಯಾಖ್ಯಾನ ನೀಡಿರುವುದು ಖಂಡನೀಯ ಎಂದಿದ್ದಾರೆ.
ದೇಶದ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಮಹಿಳೆಯರ ವಿರುದ್ಧ ಇಂತಹ ದ್ವೇಷಪೂರಿತ ಹೇಳಿಕೆಗಳು ಆತಂಕಕಾರಿಯಾಗಿವೆ. ನಾನು ಕ್ರೀಡಾ ಕ್ಷೇತ್ರದಲ್ಲಿ ಭಾರತಕ್ಕೆ ಪದಕಗಳನ್ನು ಗೆದ್ದಾಗ, ಕಾಂಗ್ರೆಸ್ ಪಕ್ಷವು ನನ್ನಿಂದ ಏನು ಬಯಸಿತ್ತು. ನಾನು ಇನ್ನೂ ಏನು ಮಾಡಬೇಕಿತ್ತು?. ಎಲ್ಲ ಹೆಣ್ಣುಮಕ್ಕಳು, ಹೆಂಗಸರು ಯಾವುದಾದರೂ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂದು ಕನಸು ಕಾಣುತ್ತಿರುವಾಗ ಈ ರೀತಿಯ ಹೇಳಿಕೆಗಳು ಬರಬಾರದು ಎಂದು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ 34 ವರ್ಷದ ನೆಹ್ವಾಲ್ ಟೀಕಿಸಿದ್ದಾರೆ.