ಬೆಂಗಳೂರು:ಕ್ರಿಕೆಟ್ ಲೋಕದ ಗಮನ ಸೆಳೆದಿರುವ ಐಪಿಎಲ್ನ ಅತಿ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡುತ್ತಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದು ಆಡುತ್ತಿರುವ ಆಟಗಾರರು ಪ್ರತಿ ಹಂತದಲ್ಲೂ ಮೇಲುಗೈ ಸಾಧಿಸಿದರು. ತಂಡದ ಆಪತ್ಬಾಂಧವ ವಿರಾಟ್ ಕೊಹ್ಲಿ ಎಂದಿನಂತೆ ಬಿರುಸಾದ ಬ್ಯಾಟಿಂಗ್ ಮೂಲಕ 29 ಎಸೆತಗಳಲ್ಲಿ 47 ರನ್ ಬಾರಿಸಿದರು. ನಾಯಕ ಪಾಫ್ ಡು ಪ್ಲೆಸಿಸ್ ನಿಧಾನವಾಗಿ ಬ್ಯಾಟ್ ಆರಂಭಿಸಿದರೂ, 39 ಎಸೆತಗಳಲ್ಲಿ 54 ರನ್ ಗಳಿಸಿದರು. ಇಬ್ಬರೂ ಸೇರಿ ಮೊದಲ ವಿಕೆಟ್ಗೆ 78 ರನ್ ಸೇರಿಸಿ ಭದ್ರ ಬುನಾದಿ ಹಾಕಿದರು.
ಅರ್ಧಶತಕ ಹೊಸ್ತಿಲಲ್ಲಿ ವಿರಾಟ್ ಔಟಾದ ಬಳಿಕ ಬಂದ ರಜ್ತ ಪಾಟೀದಾರ್ ಮತ್ತೊಮ್ಮೆ ಅಬ್ಬರಿಸಿ 41 ರನ್ ಗಳಿಸಿದರೆ, ಕ್ಯಾಮರೂನ್ ಗ್ರೀನ್ ಔಟಾಗದೆ 38, ದಿನೇಶ್ ಕಾರ್ತಿಕ್ 14, ಗ್ಲೆನ್ ಮ್ಯಾಕ್ಸ್‌ವೆಲ್ 16 ರನ್ ಗಳಿಸಿ ತಂಡ ಬೃಹತ್ ಮೊತ್ತ ದಾಖಲಿಸಲು ನೆರವಾದರು.
ಅಡ್ಡಿಯಾಗಿದ್ದ ಮಳೆ:ಪಂದ್ಯ ಆರಂಭವಾಗಿ ಬ್ಯಾಟಿಂಗ್ ಮಾಡುತ್ತಿದ್ದಾಗ ಆರ್ಸಿಬಿಗೆ ಮಳೆರಾಯ ಅಲ್ಪ ಅಡ್ಡಿ ಉಂಟು ಮಾಡಿದ್ದ. 3 ಓವರ್ಗಳಲ್ಲಿ 31 ರನ್ ಗಳಿಸಿದ್ದಾಗ ಮಳೆ ಬಂದಿತು. ಇದರಿಂದ ಆಟ 20 ನಿಮಿಷ ನಿಂತಿತು. ಮಳೆ ನಿಂತ ಬಳಿಕ ಆರ್ಸಿಬಿ ಬ್ಯಾಟರ್ಗಳು ರನ್ ಮಳೆ ಸುರಿಸಿದರು.