ಹೈದರಾಬಾದ್:ಅಬ್ಬಾ..ಅಂತೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಗೆಲ್ಲಿತು. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 35 ರನ್ ಜಯದ ಮೂಲಕ 17ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿಯ ಅಭಿಮಾನಿಗಳು ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟರು. ಅದರಲ್ಲೂ ದೈತ್ಯ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಹೈದರಾದಾಬ್ ಅನ್ನು ಆರ್ಸಿಬಿ ಬೌಲರ್ಗಳು ಕಟ್ಟಿಹಾಕಿದ್ದು ಅಚ್ಚರಿಯ ಜೊತೆಗೆ ಮುಂದಿನ ಪಂದ್ಯಗಳಿಗೆ ನಿರೀಕ್ಷೆಯೂ ಹೆಚ್ಚಿಸಿತು.
ರಾಶಿ ರಾಶಿ ರನ್ ಬಿಟ್ಟುಕೊಟ್ಟು ಬ್ಯಾಟಿಂಗ್ನಲ್ಲೂ ವೈಫಲ್ಯ ಕಾಣುತ್ತಿದ್ದ ಕ್ಯಾಮರೂನ್ ಗ್ರೀನ್ ಆಲ್ರೌಂಡರ್ ಆಟ, ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾರ ಸ್ಪಿನ್ ಜಾದೂ ಕೆಲಸ ಮಾಡಿತು. ಪ್ರತಿ ಪಂದ್ಯದಲ್ಲೂ 'ಫಿಫ್ಟಿ' ಬಾರಿಸಿಕೊಳ್ಳುತ್ತಿದ್ದ ಮೊಹಮದ್ ಸಿರಾಜ್, ಯಶ್ ದಯಾಳ್ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತಮ್ಮ ಅಸಲಿ ಬೌಲಿಂಗ್ ಮಾಡಿ ಹೊಗಳಿಕೆಗೆ ಪಾತ್ರವಾದರು. ಎಲ್ಲರ ಪ್ರಯತ್ನಗಳ ಫಲ 35 ರನ್ಗಳ ಗೆಲುವು. ಟೂರ್ನಿಯಲ್ಲಿ 2ನೇ ಜಯ.
ಸಿಡಿದ ವಿರಾಟ್, ಪಾಟೀದಾರ್:ಸತತ 6 ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ಆರ್ಸಿಬಿ ಹೈದರಾಬಾದ್ನಲ್ಲಿ ಬೇಸಿಗೆಯ ದಗೆಯ ನಡುವೆ ತಣ್ಣಗೆ 206 ರನ್ ಪೇರಿಸಿತು. ತಂಡದ ಏಕೈಕ ಆಧಾರ ವಿರಾಟ್ ಕೊಹ್ಲಿ 43 ಎಸೆತಗಳಲ್ಲಿ 51 ರನ್ ಬಾರಿಸಿದರು. ನಾಯಕ ಡು ಪ್ಲೆಸಿಸ್ 25 ರನ್ ಗಳಿಸಿದರು. ಟಾಸ್ ಗೆದ್ದು ಬ್ಯಾಟಿಂಗ್ ಪಡೆದಿದ್ದನ್ನು ಸಮರ್ಥಿಸಿಕೊಂಡ ತಂಡ ಮೊದಲ 4 ಓವರ್ಗಳಲ್ಲಿ 50 ರನ್ ಬಾಚಿತು. ಬಳಿಕ ಬಂದ ಸ್ಟಾರ್ ಪ್ಲೇಯರ್ ವಿಲ್ ಜಾಕ್ 6 ರನ್ಗೆ ವಿಕೆಟ್ ನೀಡಿ ಮತ್ತೆ ನಿರಾಸೆ ಮೂಡಿಸಿದರು.
ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ರಜತ್ ಪಾಟೀದಾರ್ ತಮ್ಮ ತೋಳ್ಬಲವನ್ನು ಇಲ್ಲಿಯೂ ಪ್ರದರ್ಶಿಸಿದರು. 20 ಎಸೆತಗಳಲ್ಲಿ 5 ಸಿಕ್ಸರ್ 2 ಬೌಂಡರಿ ಸಮೇತ 50 ರನ್ ದಾಖಲಿಸಿದರು. ಇದರಿಂದ ತಂಡದ ರನ್ರೇಟ್ ಏರುಗತಿಯಲ್ಲಿ ಸಾಗಿತು. ಕ್ಯಾಮರೂನ್ ಗ್ರೀನ್ 37 ರನ್ ಗಳಿಸಿ ಆಧರಿಸಿದರು. ದಿನೇಶ್ ಕಾರ್ತಿಕ್ 11, ಸ್ವಪ್ನಿಲ್ ಸಿಂಗ್ 12 ರನ್ಗಳಿಂದ ತಂಡ ನಿಗದಿತ ಓವರ್ಗಳಲ್ಲಿ 7 ವಿಕೆಟ್ಗೆ 206 ರನ್ ಗಳಿಸಿತು. ಜಯದೇವ್ ಉನಾದ್ಕಟ್ 3, ಟಿ.ನಟರಾಜನ್ 2 ವಿಕೆಟ್ ಪಡೆದು ಮಿಂಚಿದರು.
ಮುದುಡಿದ ದೈತ್ಯ ಬ್ಯಾಟಿಂಗ್ ಪಡೆ:ಮೊದಲ ಪಂದ್ಯದಲ್ಲಿ ಆರ್ಸಿಬಿಯನ್ನು ಚೆಂಡಾಡಿದ್ದ ಹೈದರಾಬಾದ್ ಬ್ಯಾಟಿಂಗ್ ಈ ಬಾರಿ ವಿಫಲವಾಯಿತು. ಟ್ರಾವಿಸ್ ಹೆಡ್ 1, ಐಡನ್ ಮಾರ್ಕ್ರಮ್ 7, ಹೆನ್ರಿಚ್ ಕ್ಲಾಸಿನ್ 7, ನಿತೀಶ್ ರೆಡ್ಡಿ 13 ರನ್ಗೆ ವಿಕೆಟ್ ನೀಡಿದ್ದು, ಆರ್ಸಿಬಿಗೆ ವರದಾನವಾಯಿತು. ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದರಿಂದ ತಂಡ ಯಾವುದೇ ಹಂತದಲ್ಲಿ ಪ್ರತಿರೋಧ ಒಡ್ಡಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್ ಸೆನ್ಸೇಷನ್ ಅಭಿಷೇಕ್ ಶರ್ಮಾ 31, ಶಹಬಾಜ್ ಅಹ್ಮದ್ 40 ನಾಯಕ ಪ್ಯಾಟ್ ಕಮಿನ್ಸ್ 31 ರನ್ ಗಳಿಸಿದರೂ, ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಆರ್ಸಿಬಿ ಬೌಲಿಂಗ್ ಸಕ್ಸಸ್:ತಂಡದ ಸೋಲಿಗೆ ಭರ್ಜರಿ ಕಾಣಿಕೆ ನೀಡುತ್ತಿದ್ದ ಆರ್ಸಿಬಿ ಬೌಲರ್ಗಳು ಈ ಪಂದ್ಯದಲ್ಲಿ ಗೆಲುವಿನ ಕಾಣಿಕೆ ತಂದರು. 206 ರನ್ ಗುರಿಯನ್ನು ಕಾಪಿಟ್ಟುಕೊಂಡರು. ಮೊದಲ ಪಂದ್ಯವಾಡಿದ ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾ, ಕ್ಯಾಮರೂನ್ ಗ್ರೀನ್ ತಲಾ 2 ವಿಕೆಟ್ ಪಡೆದು ಹೈದರಾಬಾದ್ ಕಟ್ಟಿಹಾಕಿದರು. ಮೊಹಮದ್ ಸಿರಾಜ್, ಯಶ್ ದಯಾಳ್ ವಿಕೆಟ್ ಪಡೆಯದಿದ್ದರೂ ರನ್ ಬಿಟ್ಟುಕೊಡಲಿಲ್ಲ. ಆದರೆ, ಟ್ರಂಪ್ ಕಾರ್ಡ್ ಎನಿಸಿಕೊಂಡಿರುವ ಲೂಕಿ ಫರ್ಗ್ಯುಸನ್ ಲಯ ಕಂಡುಕೊಳ್ಳುತ್ತಿಲ್ಲ. ಈ ಆವೃತ್ತಿಯಲ್ಲಿ ಆರ್ಸಿಬಿ 2ನೇ ಜಯ ದಾಖಲಿಸಿದರೂ, ಪಾಯಿಂಟ್ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗದೇ ಕೊನೆಯಲ್ಲೇ ಉಳಿದಿದೆ. ಹೈದರಾಬಾದ್ ಟೂರ್ನಿಯಲ್ಲಿ 3ನೇ ಸೋಲು ಕಂಡು, ಮೂರನೇ ಸ್ಥಾನದಲ್ಲಿ ಮುಂದುವರಿಯಿತು.
ಇದನ್ನೂ ಓದಿ:ಅಕ್ಷರ್, ಪಂತ್ ಜೋಡಿ ಆಟಕ್ಕೆ ಮಂಕಾದ ಗುಜರಾತ್: ಡೆಲ್ಲಿಗೆ ರೋಚಕ ಗೆಲುವು - DC Beat GT