ಮೆಲ್ಬರ್ನ್:ಕನ್ನಡದ ಹೆಮ್ಮೆಯ ಕುವರ, ಖ್ಯಾತ ಟೆನಿಸ್ಸಿಗ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಓಪನ್‌ನಲ್ಲಿ ಚರಿತ್ರಾರ್ಹ ಸಾಧನೆ ಮಾಡಿದರು. ಮೆಲ್ಬೋರ್ನ್ ಪಾರ್ಕ್ನಲ್ಲಿ ಜನವರಿ 27 ರಂದು ನಡೆದ ಪುರುಷರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಪ್ರಶಸ್ತಿ ಜಯಿಸಿದರು. ಗ್ರಾಂಡ್ಸ್ಲಾಮ್ ಗೆದ್ದ ಅತಿ ಹಿರಿಯ ಟೆನಿಸ್ ಆಟಗಾರ ಎಂಬ ದಾಖಲೆಯನ್ನೂ ಬೋಪಣ್ಣ ಬರೆದರು.
ಇಟಲಿಯ ಸಿಮೋನೆ ಬೊಲೆಲ್ಲಿ ಮತ್ತು ಆಂಡ್ರಿಯಾ ವವಸೋರಿ ವಿರುದ್ಧ ನಡೆದ ಅಂತಿಮ ಹಣಾಹಣಿಯಲ್ಲಿ 7-6 (7-0), 7-5 ಅಂತರದಿಂದ ಇಂಡೋ- ಆಸ್ಟ್ರೇಲಿಯನ್ ಜೋಡಿ ಗೆಲುವು ಸಾಧಿಸಿತು. ಈ ಮೂಲಕ 43 ವರ್ಷದ ಬೋಪಣ್ಣ ವೃತ್ತಿಜೀವನದ ಮೊದಲ ಗ್ರಾನ್ಸ್ಲಾಮ್ ಟೂರ್ನಿಯ ಪ್ರಶಸ್ತಿಯನ್ನು ಎತ್ತಿಹಿಡಿದರು.
ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂಗೆ ಇಟಲಿಯ ಟೆನಿಸ್ ಜೋಡಿ ಕಠಿಣ ಪೈಪೋಟಿ ನೀಡಿತು. ಪಂದ್ಯದ ಮೊದಲ ಸೆಟ್ 7-6 ರಲ್ಲಿ ಸಾಗಿದಾಗ ಟೈಬ್ರೇಕರ್‌ಗೆ ನಡೆಸಬೇಕಾಯಿತು. ಇಂಡೋ- ಆಸೀಸ್ ಜೋಡಿ ಸೆಟ್ ಅನ್ನು 7-0 ರಲ್ಲಿ ಅಧಿಕಾರಯುತವಾಗಿ ಗೆದ್ದುಕೊಂಡರು. ಎರಡನೇ ಸೆಟ್ನಲ್ಲೂ ಪ್ರಬಲ ಸ್ಪರ್ಧೆ ಕಂಡು ಬಂದಿತು. 11ನೇ ಗೇಮ್ನಲ್ಲಿ ಇಟಲಿ ಜೋಡಿ ಸರ್ವೀಸ್ ಬ್ರೇಕ್ ಮಾಡಿದ ಬೋಪಣ್ಣ ಮತ್ತು ಎಬ್ಡೆನ್ ಜೋಡಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಬಳಿಕ 7-5 ರಲ್ಲಿ ಸೆಟ್ ಗೆದ್ದು ಪ್ರಶಸ್ತಿಯನ್ನು ಜಯಿಸಿದರು.
2010 ಮತ್ತು 2023ರಲ್ಲಿ ಫೈನಲ್ ಪ್ರವೇಶಿಸಿದ್ದರೂ, ಪ್ರಶಸ್ತಿ ಮರೀಚಿಕೆಯಾಗಿತ್ತು. 2017 ರಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಕೆನಡಾದ ಗ್ಯಾಬ್ರಿಯೆಲಾ ದಬ್ರೊವ್ಸ್ಕಿ ಅವರೊಂದಿಗೆ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದಾರೆ. ಆಸೀಸ್ ಓಪನ್ ಗೆಲ್ಲುವ ಮೂಲಕ ಬೋಪಣ್ಣ ಪುರುಷರ ಡಬಲ್ಸ್ ವಿಭಾಗದಲ್ಲಿ ನಂಬರ್ 1 ಆಟಗಾರನ ಸ್ಥಾನವನ್ನು ಭದ್ರಪಡಿಸಿಕೊಂಡರು.