ಪ್ಯಾರಿಸ್ (ಫ್ರಾನ್ಸ್): ಭಾರತದ ರೋಹನ್ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ಅವರು ಭಾನುವಾರ ರಾತ್ರಿ ನಡೆದ ಪ್ಯಾರಿಸ್ ಒಲಿಂಪಿಕ್ಸ್ನ ಪುರುಷರ ಡಬಲ್ಸ್ ಟೆನ್ನಿಸ್ ತಮ್ಮ ಆರಂಭಿಕ ಪಂದ್ಯದಲ್ಲಿ ಫ್ರೆಂಚ್ ಜೋಡಿ ಗೇಲ್ ಮೊನ್‌ಫಿಲ್ಸ್ ಮತ್ತು ಎಡ್ವರ್ಡ್ ರೋಜರ್-ವಾಸೆಲಿನ್ ವಿರುದ್ಧ ಸೋಲನುಭವಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಜೋಡಿ 5-7, 2-6 ಅಂತರದಿಂದ ಸೋಲನುಭವಿಸಿದ್ದು, ಇದರೊಂದಿಗೆ ಭಾರತದ ಪದಕ ಕನಸು ಕೂಡ ಭಗ್ನಗೊಂಡಿದೆ.
ಫ್ರೆಂಚ್ ಜೋಡಿಯು 1 ಗಂಟೆ 16 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದು ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಎರಡನೇ ಸುತ್ತಿನಲ್ಲಿ ಮೊನ್ಫಿಲ್ಸ್ ಮತ್ತು ವೆಸ್ಲಿನ್ ಜೋಡಿ ಜರ್ಮನಿಯ ಕೆವಿನ್ ಕ್ರಾವಿಟ್ಜ್ ಮತ್ತು ಟಿಮ್ ಪುಯೆಟ್ಜ್ ಜೋಡಿಯನ್ನು ಎದುರಿಸಲಿದೆ.
ಈ ಪಂದ್ಯದಲ್ಲಿ ಆರಂಭದಿಂದಲೇ 2-4 ಅಂತರದಿಂದ ಬಾಲಾಜಿ ಮತ್ತು ಬೋಪಣ್ಣ ಜೋಡಿ ಹಿನ್ನಡೆ ಅನುಭವಿಸಿತ್ತು. ಬಳಿಕ ಕಮ್ ಬ್ಯಾಕ್ ಮಾಡಲು ಭಾರತದ ಜೋಡಿ ಸತತ ಪ್ರಯತ್ನ ನಡೆಸಿ ಸ್ಕೋರ್ ಲೈನ್ 5-5ಕ್ಕೆ ಇಳಿಸಿತು. ಪಂದ್ಯದ ಮೊದಲ ಸೆಟ್ ಟೈ ಬ್ರೇಕರ್‌ನಲ್ಲಿ ಅಂತ್ಯಗೊಳ್ಳಲಿದೆ ಎಂದೇ ಅಂದಾಜಿಸಲಾಗಿತ್ತು. ಆದ್ರೆ ಎರಡನೇ ಬ್ರೇಕ್ ಪಡೆದ ಫ್ರೆಂಚ್ ಜೋಡಿ 42 ನಿಮಿಷಗಳಲ್ಲಿ 5-7 ಅಂತರದಿಂದ ಮೊದಲ ಸೆಟ್ನಲ್ಲಿ ಗೆಲುವು ಸಾಧಿಸಿತು.